**ಮನಸ್ಸಿದ್ದರೆ ಮಾರ್ಗ**
ರೈತನೇ ದೇಶದ ಬೆನ್ನೆಲುಬು. ನಮಗೆ ಅನ್ನ ಕೊಡುವ ದಾತ ರೈತ. ಸುರಪುರ ಎಂಬ ಊರು ರೈತರೇ ಬದುಕುತ್ತಿರುವ ಒಂದು ಪುಟ್ಟ ಗ್ರಾಮ. ಈ ಗ್ರಾಮದಲ್ಲಿ ಎಲ್ಲ ರೈತರೂ ಒಟ್ಟಾಗಿ ಸಂತೋಷದಿಂದ ಬದುಕುತ್ತಿದ್ದರು. ಪ್ರತಿದನ ಹೊಲಗದ್ದೆಗಳಲ್ಲಿ ಕೆಲಸ ಮಾಡುವುದೇ ಅವರ ನಿತ್ಯದ ಕಾಯಕವಾಗಿತ್ತು. ಎಲ್ಲರೂ ಸಹಾಯ ಸಹಕಾರದಿಂದ ಉತ್ತಮ ಜೀವನ ನಡೆಸುತ್ತಿದ್ದರು.
ಆ ಗ್ರಾಮದಲ್ಲಿ ಕಲ್ಲಪ್ಪ ಎಂಬ ಬಡ ರೈತ ವಾಸಿಸುತ್ತಿದ್ದ. ತನಗಿರುವ ಅಲ್ಪ ಹೊಲದಲ್ಲಿ ಮಳೆಗಾಲದ ಅವಧಿಯಲ್ಲಿ ಮಾತ್ರ ಬೆಳೆ ತೆಗೆದು ತನ್ನ ಜೀವನಕ್ಕೆ ಅಲ್ಪಸ್ವಲ್ಪ ಆದಾಯವನ್ನು ತಂದುಕೊಳ್ಳುತ್ತಿದ್ದ. ಆದರೆ ಯಾವುದೋ ಕಾರಣದಿಂದ ಮತ್ತೆ ಸಾಲಗಾರನಾಗಿ ಬದುಕುತ್ತಿದ್ದ. ಆದರೂ ಇತರರ ಹೊಲಗಳಲ್ಲಿ ಕೆಲಸ ಮಾಡಿ ಸಾಲದಿಂದ ಮುಕ್ತನಾಗುತ್ತಿದ್ದ.
ಕಲ್ಲಪ್ಪ ಬಡವನಾದರೂ ತುಂಬಾ ಪ್ರಾಮಾಣಿಕ ಹಾಗೂ ನಿಷ್ಠಾವಂತ ರೈತ. ಹಾಸಿಗೆ ಇದ್ದಷ್ಟೇ ಕಾಲು ಚಾಚು ಎನ್ನುವ ನೀತಿಗೆ ಬದ್ದನಾಗಿದ್ದ.
ಇತ್ತೀಚಿನ ವರ್ಷಗಳಲ್ಲಿ ಮಳೆ ತುಂಬಾ ಕಡಿಮೆಯಾಗತೊಡಗಿತು. ಗ್ರಾಮದ ರೈತರಿಗೆ ವರ್ಷದಲ್ಲಿ ಎರಡು ಬೆಳೆ ತೆಗೆಯುವುದು ಕಷ್ಟವಾಗತೊಡಗಿತು. ಎಲ್ಲಾ ರೈತರೂ ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಾ ಯಾವುದೇ ದಾರಿ ಇಲ್ಲದೇ ವಿಧಿಬರಹ ಎಂದು ಸುಮ್ಮನಾದರು.
ಕಲ್ಲಪ್ಪ ಒಂದು ದಿನ ಎಲ್ಲ ರೈತರನ್ನು ಕರೆದು , " ಇತ್ತೀಚಿನ ದಿನಗಳಲ್ಲಿ ಮಳೆ ತುಂಬಾ ಕಡಿಮೆಯಾಗುತ್ತಿದೆ. ಸುಮ್ಮನೇ ಕೈಕಟ್ಟಿ ಕುಳಿತುಕೊಳ್ಳುವುದು ಸರಿಯಲ್ಲ. ವ್ಯವಸಾಯ ಮಾಡುವುದು ದೇಶ ಸೇವೆ ಇದ್ದಹಾಗೆ. ನಾವೆಲ್ಲಾ ದೇಶದ ಬೆನ್ನೆಲುಬು. ವ್ಯವಸಾಯಕ್ಕೆ ನೀರಿಗಾಗಿ ಏನಾದರೂ ವ್ಯವಸ್ಥೆ ಮಾಡಿಕೊಳ್ಳೋಣ " ಎಂದನು. ಉಳಿದ ರೈತರೆಲ್ಲರೂ ಕಲ್ಲಪ್ಪನ ಮಾತುಗಳನ್ನು ತಾತ್ಸಾರ ಮಾಡಿದರು. ಎಲ್ಲ ಹೊಲಗಳಿಗೆ ಸಾಕಾಗುವಷ್ಟು ನೀರನ್ನು ಸಮುದ್ರದಿಂದಲೇ ತರಬೇಕು ಎಂದರು. ಆಗ ಕಲ್ಲಪ್ಪ, " ನನ್ನ ಹೊಲದ ಬಳಿ ಇರುವ ವಿಶಾಲವಾದ ಖಾಲಿ ವ್ಯರ್ಥ ಜಮೀನಿನಲ್ಲಿ ಕೆರೆ ನಿರ್ಮಿಸೋಣ. ಎತ್ತರದ ಪ್ರದೇಶಗಳಿಂದ ಬರುವ ನೀರನ್ನು ಅಲ್ಲಿ ಸಂಗ್ರಹಿಸಿ ಬರಗಾಲದಲ್ಲಿ ಉಪಯೋಗಿಸಿಕೊಳ್ಳೋಣ " ಎಂದು ಸಲಹೆ ನೀಡಿದ. ಯಾರೂ ಸಹ ಅಂತಹ ಸಾಹಸಕ್ಕೆ ಕೈ ಹಾಕಲು ಮುಂದೆ ಬರಲಿಲ್ಲ. ಎಲ್ಲರೂ , "ಮಾತನಾಡಿದಷ್ಟು ಮಾಡುವುದು ಸುಲಭವಲ್ಲ. ಕಲ್ಲಪ್ಪನಿಗೆ ಎಲ್ಲೋ ತಲೆ ಕೆಟ್ಟಿರಬೇಕು .ದೇವರು ಶಾಂತನಾದಾಗ ಮಳೆ ಬರಿಸುತ್ತಾನೆ ನಡೆಯಿರಿ." ಎಂದು ಎಲ್ಲರೂ ತಮ್ಮ ತಮ್ಮ ಮನೆಗೆ ತೆರಳಿದರು.
ಕಲ್ಲಪ್ಪ ಸುಮ್ಮನೆ ಕುಳಿತುಕೊಳ್ಳಲಿಲ್ಲ. ಮರುದಿನವೇ ತಾನು ಅಂದುಕೊಂಡ ಕೆಲಸವನ್ನು ಪ್ರಾರಂಭಿಸಿದ. ವಿಶಾಲವಾದ ಪ್ರದೇಶದಲ್ಲಿ ಬೆಳೆದಿದ್ದ ಮುಳ್ಳುಗಿಡಗಳನ್ನೆಲ್ಲಾ ಸ್ವಚ್ಛ ಗೊಳಿಸಿ ಪ್ರತಿದಿನವೂ ತನ್ನ ಸಾಮರ್ಥ್ಯ ಕ್ಕೆ ತಕ್ಕಷ್ಟು ಮಣ್ಣು ತೆಗೆಯತೊಡಗಿದನು. ಕಲ್ಲಪ್ಪನ ಕೆಲ ಸ್ನೇಹಿತರು ಕಲ್ಲಪ್ಪನ ಕಾರ್ಯದಲ್ಲಿ ಸತ್ಯವಿದೆಯೆಂದು ತಿಳಿದು ಕಲ್ಲಪ್ಪ ನ ಕೈಜೋಡಿಸಿದರು. ದಿನಗಳು, ವಾರಗಳು, ತಿಂಗಳುಗಳು ಕಳೆದವು. ಒಮ್ಮೆ ಅಕಾಲಿಕವಾಗಿ ಮಳೆ ಬಂದಿತು. ವ್ಯರ್ಥವಾಗಿ ಹರಿದು ಹೋಗುತ್ತಿದ್ದ ಸ್ವಲ್ಪ ನೀರು ಕಲ್ಲಪ್ಪ ತೆಗೆದಿದ್ದ ಕೆರೆಯಲ್ಲಿ ನಿಂತುಕೊಂಡಿತು. ಇದನ್ನು ಕಂಡ ಕಲ್ಲಪ್ಪನಿಗೆ ತುಂಬಾ ಸಂತೋಷವಾಯಿತು.
ಹಳ್ಳಿಯ ಜನರನ್ನೆಲ್ಲಾ ಕರೆದು ಕೆರೆಯಲ್ಲಿ ಸಂಗ್ರಹವಾದ ನೀರನ್ನು ತೋರಿಸಿದ. ಹಳ್ಳಿಯ ಜನರಿಗೆ ಕಲ್ಲಪ್ಪನ ಕಾರ್ಯದಲ್ಲಿ ಯಶಸ್ಸು ಕಂಡರು. ಎಲ್ಲರೂ ಕಲ್ಲಪ್ಪನ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ನಿರ್ಧಾರ ಮಾಡಿದರು. ಮಳೆಗಾಲದ ದಿನಗಳು ಪ್ರಾರಂಭವಾಗುವಷ್ಟರಲ್ಲಿ ವಿಶಾಲವಾದ ಕೆರೆ ನಿರ್ಮಾಣವಾಯಿತು.
ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಮಳೆಯ ನೀರು ಕೆರೆಗೆ ಹರಿದು ಬಂದಿತು. ಜನರೆಲ್ಲಾ ಸೇರಿ ಬೇರೆ ಬೇರೆ ಕಡೆ ಹರಿದು ಹೋಗುತ್ತಿದ್ದ ನೀರನ್ನು ಕೆರೆಗೆ ಹರಿಯುವಂತೆ ದಾರಿ ಮಾಡಿದರು. ಮಳೆಗಾಲ ಮುಗಿಯುವದರೊಳಗೆ ಕೆರೆ ಮಳೆಯ ನೀರಿನಿಂದ ಭರ್ತಿಯಾಯಿತು. ಭರ್ತಿಯಾದ ಕೆರೆಯನ್ನು ಕಂಡು ಗ್ರಾಮದ ಜನರಿಗೆ ತುಂಬಾ ಸಂತೋಷವಾಯಿತು. ಬಡ ರೈತ ಕಲ್ಲಪ್ಪನ ಕಾರ್ಯವನ್ನು ಎಲ್ಲರೂ ಮೆಚ್ಚಿದರು. ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ಕಲ್ಲಪ್ಪ ಕಲ್ಲಪ್ಪ ಜಗತ್ತಿಗೆ ತೋರಿಸಿಕೊಟ್ಟನು.
=> ವೆಂಕಟೇಶ ಚಾಗಿ
images : pixabay.com
No comments:
Post a Comment