ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld ಎಂದು search ಮಾಡಿ

Thursday 11 April 2019

Kmpo4 - kavana - ಯುಗಾದಿ ವಿಶೇಷ ಕವನಗಳು

*ಯುಗಾದಿ ವಿಶೇಷ ಕವನಗಳು
☘🍃🎍🎋🍂🌿🌿


*ಧರೆಯ ಕ್ಷಮೆ ಕೋರಲು ಬಂದ ವಸಂತ*
***

ಎಲೆಯುದುರಿಸಿ ಮೈಯ್ಯೊಡ್ಡಿದ ವಸಂತ
ಹೊಸ ಅಲೆ ತಾಕಿಸಿಕೊಂಡ
ನಿಂತ ನೆಲದಮೇಲೆ ಬಿದ್ದೆದ್ದ ಜಾಗವ ನೆನೆದು
ಮತ್ತಷ್ಟು ಎದೆಯುಬ್ಬಿಸಿದ

ತಲೆಗೂದಲಗೆದರಿ ನಿಂತವಳಿಗೆ ನೆರಳಾಗಿ
ಗಾಳಿಯಾಗಿ ತಲೆನೇವರಿಸಿ
ಉಸಿರನು ಉದರಕೆ ಉಣಿಸಿ ಕುಣಿದು
ಸೃಷ್ಠಿಯ ಮೈದಡವಿ ಸಂತ್ರುಪ್ತನಾದ

ಜಗದ ಕಹಿಗೆ ಸಿಹಿ ಬೆರೆಸಿ ಚಿಗುರಿನಿಂತು
ಯುಗದ ಸಡಗರವ ಬಯಸಿದ
ಬಾಳಿನಾಚೆಯ ಬೀದಿಯಲಿ ತಾ ಕುಳಿತು
ನಾಳೆಯನರಿವನು ಬೋಧಿಸಿದ

ಕೊಡಲಿ ಏಟಲಿ ಕತ್ತರಿಸಿಕೊಂಡ ತುದಿಯ
ಒಡಲನೋ‌ವನು ನುಂಗಿದ
ಬಳಲುತ್ತಿದ್ದ ದಾರಿಹೋಕನಲ್ಲಿ
ಧರೆಯ ಕ್ಷಮೆಯನು ಕೋರಿದ

ನೋವು ನಲಿವಿನ ಕೋಟಿ ಬೀಜವ
ಎಲ್ಲರೆದೆಯಲು ಬಿತ್ತಿದ
ಅಳಲು ತೋಡಿಕೊಂಡ ಮನದಲಿ
ಬೇವು ಬೆಲ್ಲವ ಹಂಚಿದ.
**
*ಸುರೇಶ ಎಲ್‌.ರಾಜಮಾನೆ, ಲಿಂಗಸಗೂರು*

**************************************

 *ವಿದಾಯದ ಘಳಿಗೆ..*


ಯುಗಾದಿಗೆ ಹೊಸ ನೆನಪು ಜೋಡಿಯಾಗಿದೆ
ಕಣ್ಣ ತುಂಬಿದ ಕನಸು ರಗುತದ ಕೋಡಿಯಾಗಿದೆ

ನೀನಿದ್ದ , ನಿನ್ನ ನೆನಪಿದ್ದ ಬದುಕೀಗ ಬರಿದಾಗಿದೆ
ಹೂ ಚಿಗುರಿ, ಕಾಯಿ ಹಣ್ಣಾಗಿದೆ ನಿಜ ಆದರೆ ಬದುಕು?

ನೀ ಬಿಟ್ಟ ಮರುಕ್ಷಣ ಸಾಯುವ ಮಾತಾಡಿದ್ದೆ 'ಸತ್ತೆನಾ'?
ನಾನು ಬದುಕಿದಂತೆ ಕಾಣುತ್ತೇನೆ ಅಷ್ಟೇ 'ಬದುಕಿಲ್ಲ'

ಬದುಕು ಇಷ್ಟೇ ನೀ ಹೇಳಿದಂತೆ ಹೊಂದಾಣಿಕೆ 'ಮನಸಿನೊಂದಿಗಾ'?
ಮನಸೋ, ದೇಹವೋ ಜೀವಚ್ಛವಗಳ ಕುರಿತು ಚಿಂತಿಸುವರಾದರೂ ಯಾರು?

ಕಾಯುವೆ ಬಿಡು ನೀ ಸಿಗದಿದ್ದರೂ'ಕಾಯುವ ಬದಲು' ಯಾರನೂ ಹುಡುಕಲೂ ಬಹುದು 'ಬದುಕು ವ್ಯಭಿಚಾರ'ವಾಗಲು

ನೀ ಕೊಟ್ಟ ಸಮಸ್ತ ಬದುಕು ಮುಂದೆ ನಿಂತು ಅಣಕಿಸುತಿದೆ
'ನೀ' ಕೊಟ್ಟದ್ದಾದರೂ ಏನೆಂದು?
ಏನೇಳಲಿ 'ಹನಿ ಕಣ್ಣೀರು' ಹನಿಸಿದ್ದೇನಷ್ಟೇ


ದುಖಿಃಸಬೇಡ, ಖಾಲಿ ಒಡಲಲಿ ಕಣ್ಣೀರು ಸುರಿಸಬೇಡ
ನಿನ್ನ ನಿಜ ಪ್ರೇಮಕ್ಕೆ 'ಆರ್ಹನಲ್ಲ' ನಾನು ಮತ್ತು ನನ್ನಿಡೀ ಜಿಂದಗೀ

-  ಶರಣಬಸವ. ಕೆ.ಗುಡದಿನ್ನಿ

****************************************

 ಉಗಿ ಉಗಿ ಅಂತಾ ಯುಗಾದಿ ಬಂತು
******************************
ಬರದ ಬಿಸಿಲ ಬಿಸಿ ಗಾಳಿ
ಬಿರುಗಾಳಿಯಾಗಿ ಬೀಸುತಿರಲು
ಬಿಸಿಲ್ಗುದುರೆಗಳು ಬೇದರಿ ಓಡುತಿರಲು
ಉಗಿ ಉಗಿ ಅಂತಾ ಯುಗಾದಿ ಬಂತು.

ಹಸಿರುಟ್ಟು ಸಿಂಗರಿಸಿಕೊಂಡು
ಕಂಗೊಳಿಸಲು ಕಾಯ್ದ ಭೂತಾಯಿ
ಒಡಲು ಬಾಯಾರಿ ಆಕಾಶದ ಹನಿ
ನೀರಿಗಾಗಿ ಬಾಯಿ ತೆರೆದು ಕಾಯಿತಿರಲು
ಉಗಿ ಉಗಿ ಅಂತಾ ಯುಗಾದಿ ಬಂತು.

ನಿತ್ಯವೂ ಬಿಸಿಲ ಬೆಂಕಿಗೆ ಭೂತಾಯಿ
ಮಡಿಲು ಬಿಸಿಯಾಗುತಿರಲು,ಮಡಿಲ
ಮಕ್ಕಳು ಬಿಸಿಲ ಬೇಗಿಗೆ ಬೆಚ್ಚಿ ಬೆಚ್ಚಿ ಬೀಳುತಿರಲು
ಉಗಿ ಉಗಿ ಅಂತಾ ಯುಗಾದಿ ಬಂತು .

ಭೂತಾಯಿಯ ಒಡಲ ನಂಬಿದ
ಮಡಿಲ ಮಕ್ಕಳು,ಹನಿ ಹೊತ್ತು ನೆತ್ತಿಯ
ಮೇಲೆ ನಡೆವ ಮೋಡಗಳು ಹನಿಯೊಡೆಯಲೆಂದು ಆಸೆಯಿಂದ ದಿಟ್ಟಿಸುತಿರಲು
ಉಗಿ ಉಗಿ ಅಂತಾ ಯುಗಾದಿ ಬಂತು.

ಹಸಿದ ಹಸುಗಳು ನೀರಿಲ್ಲದೆ ನೇಲಕ್ಕುರುಳುತಿರಲು
ರೈತ ರೈಲತ್ತಿ ಊರು ಬಿಡುತಿರಲು,ಹಕ್ಕಿಗಳು ಆಹಾರವಿಲ್ಲದೆ ರೆಕ್ಕೆ ಕಳಚುತಿರಲು,ಸಂಕಟಕೂ ಹನಿ ನೀರು ಹಾಕಲು ನೀರಿಲ್ಲದೆ ನಿತ್ರಾಣಾದ ಭೂತಾಯಿ
ಮುಂದೆ ಉಗಿ ಉಗಿ ಅಂತಾ ಯುಗಾದಿ ಬಂತು .

ಶೇಖರ್. ಎಂ.ಸುರುಪೂರು

*****************************************

 ಯುಗಾದಿ

ಬಂದಿತು ಮತ್ತೇ ಯುಗಾದಿ
ತಂದಿತು ನಮಗೆ ಹೊಸ ಹಾದಿ

ಬೇವು ಬೆಲ್ಲ ಪಾಯಸವ ಮಾಡಿ
ಮನೆಯವರೆಲ್ಲರು ಒಡಗೂಡಿ

ಕುಡಿಯೋಣ ಬೇವು ಎಲ್ಲರು ಕೂಡಿ
ಕಳೆಯುವ ಬಾಳನು ಸುಖವಾಗಿ

ಅರಿಯುವ ಯುಗಾದಿ ಸಂದೇಶವ
ಪಡೆಯುವ ಜೀವನ ಸಾರ್ಥಕವ

✍ಅಭಿಷೇಕ ಬಳೆ ಮಸರಕಲ್

****************************************

"ಯುಗಾದಿ ನಿಮಿತ್ತ ಕವನ ಸ್ಪರ್ಧೆಗಾಗಿ"

ಬಂದೈತಿ ಹಬ್ಬ ಯುಗಾದಿ ಹಬ್ಬ"
(ಕವನದ ಶೀರ್ಷಿಕೆ)

ಬಂದೈತಿ ಹಬ್ಬ ಯುಗಾದಿ ಹಬ್ಬ ತಂದೈತಿ ಏನು ವಿಶೇಷ ಹೇಳಪ್ಪ?
ಎಲ್ಲಿನ ಬಾಳೂ ಅಲ್ಲಿಗೇ ನಿಂತೈತಿ
ಎಲ್ಲಿನ ಗೋಳೂ ಅಲ್ಲಿಗೇ
ನಿಂತೈತಿ ಏನಂತ ಹೊಗಳೂದೂ
ತಿಳೀದಂಗ ಆಗೇತಿ ||ಬಂದೈತಿ ಹಬ್ಬ ಯುಗಾದಿ ಹಬ್ಬ||

ಹ್ವಾದ ವರುಸದ ಹಿಂದ
ಮಾಡಿದ್ದ ಸಾಲ ಈ ವರುಸಾ
ಬಂದಾ ಬುಡ್ತು ಕಣ್ಣು ಮುಚ್ಚಿದ್ದೇ
ಇಲ್ಲ ನೋಡಿದ್ರ ಕೈಯಾಗ
ನಯಾ ಪೈಸಾನೂ ಇಲ್ಲ ಕಣ್ಣು
ಗುಡ್ಡಿ ತಿರುಗಾ ತಿರುಗುತಾವ
ರಕ್ತಾ ಬರುತೈತಾಗ್ಲೀ ನೀರು
ಬರ್ತಿಲ್ಲ ನೀವಾ ಹೇಳ್ರಿ ಈಗ
ಹ್ಯಾಂಗ ತೀರಿಸೋದು ಮಾಡಿದ ಸಾಲ?
 ಹ್ಯಾಂಗ ಮಾಡಿ ಉಣ್ಣೂದು ಯುಗಾದಿ ಹಬ್ಬ?
||ಬಂದೈತಿ ಹಬ್ಬ ಯುಗಾದಿ ಹಬ್ಬ||

ನಮ್ ತಾತನ ಕಾಲಕ್ಕ
ಇಲಿಯಾಗಿದ್ದ ಸಾಲ ನನ್ನ
ಟೇಮಿಗೆ ಹುಲಿಯಾಗಿ ಕುಂತಾದ
ಸಾಲದ ಗಂಟು ಕರಗಿಸಲಾಕ
ಮೈಮುರ್ದು ದುಡ್ದ ನಮ್ ತಾತ
ಸಾಲ್ದಾಗೇ ದುಡ್ದೂ ದುಡ್ದೂ
ಕಡಿಗೆ ಸುಣ್ಣಾಗಿ ಸತ್ತೇ
ಹೋದ್ನಂತ ನಮ್ಮವ್ವ ಹೇಳ್ತಿದ್ಲು
ಇದೇ ಸಾಲ್ದಾಗ ಸಾಲ ಮಾಡಿ
ನಮ್ಮಪ್ಪನೂ ಸತ್ನಂತ ನಮ್ಮಮ್ಮ
ಸೆರಗಿನ ಚುಂಗಿಡಿದು
ಕಣ್ಣಿಗೊತಿಕೆಂಡು ಅಳುತಾಳ
ಈಗ್ಲೂ....ನೀವಾ ಹೇಳಿ ಈಗ
ಹ್ಯಾಂಗ ತೀರಿಸೋದು ಮಾಡಿದ ಸಾಲ?
ಹ್ಯಾಂಗ ಮಾಡಿ ಉಣ್ಣೂದು
ಯುಗಾದಿ ಹಬ್ಬ?
 ||ಬಂದೈತಿ ಹಬ್ಬ ಯುಗಾದಿ ಹಬ್ಬ||

 ಮಾಡಿದ ಸಾಲ ಹೆಂಗರ
ತೀರಿಸಬೇಕಂತ ಹೊಲ ಹಸನು
ಮಾಡಿ ಗದ್ದಿ ಮಾಡಿದ್ದೆ ಒಂದು
ಫಸಲು ಬಂದಿದ್ರ
ತೆಗದಾಬುಡುತಿದ್ದೆ ಸಾಲದ
ರೊಕ್ಕ ಬಂದ್ಹಾಂಗ ಬಂದು ಮಳೆ
ಮೋಡದಾಗೇ ಇಂಗ್ಹೋಯ್ತು
ನಮ್ ಕಣ್ಣಿಗೆ ಮಾತ್ರ ಕಣ್ಣೀರೇ
ಮಿಗಿಲಾಯ್ತು ನೀವಾ ಹೇಳಿ
ಈಗ ಹ್ಯಾಂಗ ತೀರಿಸೋದು
ಸಾಲ?
ಹ್ಯಾಂಗ ಮಾಡಿ ಉಣ್ಣೂದು
ಯುಗಾದಿ ಹಬ್ಬ?
 ||ಬಂದೈತಿ ಹಬ್ಬ ಯುಗಾದಿ ಹಬ್ಬ||

ಯುಗಾದಿ ಹಬ್ಬ ಅಂದ್ರ ಬೇವು-
ಬೆಲ್ಲ ಅಂತಾರ ಶಾಸ್ತ್ರಕ್ಕ ನಮ್
ಬದುಕಿನ ಬವಣಿ ಕೇಳಿದವ್ರು
ನೀವಾ ಹೇಳಬೇಕು ಅದು
ಹ್ಯಾಂಗ ಮಾಡಿ ಉಣ್ಣೂದು
ಯುಗಾದಿ ಹಬ್ಬ ಅಂತ?
||ಬಂದೈತಿ ಹಬ್ಬ ಯುಗಾದಿ ಹಬ್ಬ||


-ವೇಣು ಜಾಲಿಬೆಂಚಿ ರಾಯಚೂರು

*********************************
ಮತ್ತೆ ಬಂದಿತು ಯುಗಾದಿ...

ಹೊಸ ವರುಷಕೆ ಹೊಸ ಹರುಷದಿ
ಹೊಸ ಬೆಳಕೊಂದು ಭೂಮಿಗೆ ಬಂದು ತಾಗಿರಲು ಈ ಮನವ
ಅವಳ ನೆನಪುಗಳ ಹೂಮಳೆಯ ಹೊತ್ತ
ಜೋಕಾಲಿಯು ಜೀಕುತ ಜೀಕುತ
ಮತ್ತೆ ಬಂದಿತು ಯುಗಾದಿ ನನ್ನ ಬಾಳಿಗೆ ..
ಹೊಸ ಚೈತನ್ಯವ ತುಂಬುತ ನನ್ನ ನಾಳೆಗೆ !!

ಮುಗ್ಧ ನಗುವು ,ಸ್ನಿಗ್ಧ ಚೆಲುವು ,
ಬಳ್ಳಿಯಂತೆ ಬಳುಕೋ ಅಂಗ ..
ಹೃದಯ ಮಾತೃ ಹೂವಿನಂಗ ..!!
ಚಿಗುರೊಡೆದ ಹಸಿರಿನಂಗ ...
ಮೋಡವೊಂದು ಮಳೆಯ ಸುರಿದಂಗ,
ಸುರಿವ ಮಳೆಗೆ ಪುಟ್ಟ ನವಿಲೊಂದು ಕುಣಿದಂಗ ..
ಕುಣಿವ ನಾಟ್ಯಕೆ ಮನವು ತಣಿದಂಗ..!!

ಹಸಿರುಟ್ಟ ಭೂದೇವಿಯು ಸಂತೋಷದಿ ನಕ್ಕಂಗ ..
ತಳಿರು - ತೋರಣವ ಹೊತ್ತು ತಂದಂಗ..!!
ಬೇವಿನ ಕಹಿಯ ಮರೆಸಿದಂಗ ..
ಬೆಲ್ಲದ ರುಚಿಯ ಸವಿದಂಗ ..!!
ಬೆಳದಿಂಗಳು ನನ್ನ ಮನೆಯೊಳಗೆ ಬಂದಂಗ ,
ನನ್ನ ಮನವನ್ನು ಸಿಂಗರಿಸಿದಂಗ
ನಿನ್ನೆಯ ಕನಸುಗಳು ನಾಳೆಗೆ ನನಸಾದಂಗ ..!!

ಮತ್ತೆ ಬಂದಿತು ಯುಗಾದಿ ನನ್ನ ಬಾಳಿಗೆ ..
ಹೊಸ ಚೈತನ್ಯವ ತುಂಬುತ ನನ್ನ ನಾಳೆಗೆ ..!!!

                               ರಮೇಶ್ ನಾರಾಯಣಪುರ
                                   ಪೋಲೀಸ್ ಇಲಾಖೆ
                                          ಕಲಬುರಗಿ..
                                            ೪-೪-೧೯

*********************************"********

      ಬಾ ಯುಗಾದಿ ಮತ್ತೆ
              ವರದೇಂದ್ರ.ಕೆ ಮಸ್ಕಿ

ಸರಪಳಿಯ ಬಿಡಿಸುವ ಮೊನಚಂತೆ
ಹರಿದ ಸೂತ್ರಕೆ ನೂತನ ಬದುಕು ಕಟ್ಟೋಕೆ
ಮುರಿದ ಚಕ್ರಕೆ  ಉರುಳೊ ಹೆಗಲಾಗಿ
ಆದ ನಷ್ಟಕೆ ಗೆಲುವಾಗಿ
ಬಾಡಿದ ಟೊಂಗೆಯಲಿ ಟಿಸಿಲೊಡೆದು
ಅರಿವಿಲ್ಲದ ಬೀಜದೊಳಗೆ ಭರವಸೆಯ ಬೇರಾಗಿ
ಬಾ ಯುಗಾದಿ ಮತ್ತೆ

ಕಲ್ಲೊಳಗೆ ಹುಟ್ಟುವ ಸಸಿಯ ವಿಶ್ವಾಸ
ಕಾರ್ಮೋಡದೊಳಗಿನ ಜೀವಹನಿ
ಭುಗಿಲೆದ್ದ ಆಕ್ರೋಶದ ಕೆಂಗಣ್ಣಿನಲಿ
ನಿರಮ್ಮಳ
ಉದ್ವೇಗದಿ ತಲ್ಲಣಿಸೊ ತನುವಿಗೆ ತಂಪಾಗಿ
ಬಿಸಿಲ ಝಳಕೆ ಕಪ್ಪಾದ ರೈತನ ಕಣ್ಣಿಗೆ ಹಸಿರಾಗಿಚ
ಬಾ ಯುಗಾದಿ ಮತ್ತೆ

ವಿಧವೆ ಪಟ್ಟಕೆ ಚಟ್ಟ ಕಟ್ಟು
ಬಂಜೆ ಒಡಲಲಿ ಬಸಿರಾಗಿ
ಬಂಜರು ನೆಲದಿ ಮೊಳಕೆ ಘಟ್ಟಿ ನೆಲವ ಸೀಳಿಬಿಡುವ ಅಗಾಧ ಬಲವಾಗಿ
ಶಕ್ತಿಹೀನ ತನುವಲಿ ಚೈತನ್ಯದುರಿಯಾಗಿ
ಹುಳಿ ಹಿಂಡುವ ಹೃದಯದಿ ಸಿಹಿಯಾಗಿ
ಬೇವಿನೊಳಗಿನ ಕಹಿಗೆ ಬೆಲ್ಲದ ನಂಟಾಗಿ
ಬದುಕ ತೋರುವ ಬೆವರಿಗೆ ಛಲದ ಸೆಲೆಯಾಗಿ
ಬಾ ಯುಗಾದಿ ಮತ್ತೆ

ಕ್ಷೀಣಿಸುತ್ತಿರುವ ಹಕ್ಕಿ ಕುಲಕೆ
ಅವಸಾನದಂಚಿನ ಮೃಗಗಳಿಗೆ
ಸಂತಾನದ  ಯುಗಾದಿ
ಅಂಕಗಳಲ್ಲಿ ಸೋತ ಓದುಗ ಮನಗಳಗೆ
ಜ್ಞಾನದ ಯುಗಾದಿ
ಹಣದಿಂದ ಬಲಿತ ಪ್ರೀತಿವಂಚಿತಗೆ
ಒಲವಿನ ಯುಗಾದಿ
ಪ್ರೇಮ ವೈಫಲ್ಯದ ಹೃದಯಕೆ ವಿಫುಲ
ಅನುರಾಗದ ಯುಗಾದಿ
ಆದಿಯಾಗಿ ಅನಾದಿಯಾಗಿ ಪ್ರತಿ ಕ್ಷಣ ಕ್ಷಣಕೂ
ಕಹಿಯೊಳಗಿನ ಔಷಧಿಗುಣವಾಗಿ
ಬಾ  ಯುಗಾದಿ
ಬಾ ಯುಗಾದಿ ಮತ್ತೆ

ವರದೇಂದ್ರ ಕೆ
************************************

ಯುಗದ ಯುಗಾದಿಗೆ ದ್ವೇಷದ ಎಲೆ ಉದುರಲಿಲ್ಲ !
**********************
ಯುಗ ಯುಗಗಳಿಂದ ಮಲೆಯ ಹೂ ಗಿಡ ಮರ ಬಳ್ಳಿಗಳೇಲ್ಲಾ ಎಲೆ ಉದುರಿಸಿ ಹೂ ಕಾಯಿಗಳಾಗಿ ಮಲೆಗೆ ಎಲೆ ಹೂವುಗಳ ತೋರಣಕಟ್ಟಿ ಸುಗಂಧದ
ಸುಂದರ ತಂಗಾಳಿಯ ಬೀಸುತ್ತಲಿವೆ.!

ಯುಗ ಯುಗಗಳ ಯುಗಾದಿಗೆ ಮಲೆಯು
ಮದುವಣಗಿತ್ತಿಯಂತೆ ಸಿಂಗಾರಗೊಂಡು
ಹಸಿರ ಸೆರಗೊತ್ತು ಬಗೆ ಬಗೆಯ ಹೂ ಮುಡಿದು
ಕೈ ಬೀಸಿ ಕರೆಯುತಿರಲು ಮಲೆಯ ಮದ್ಯ ಝೈಂಕರಿಸುವವು ದುಂಬಿಗಳು, ಅನುರಾಗದ
ಆನಂದದ ಕಲರವದಲಿ ಹಕ್ಕಿ ಪಕ್ಷಿಗಳು.

ಯುಗ ಯುಗಗಳ ಯುಗಾದಿಗೆ ಅರಳಿ ನಿಂತ
ಬೇವು ಮಾವಗಳ ಸುಖ ಸೌಂದರ್ಯಕ್ಕೆ
ಮುಂಜಾವಿನ ಕೆಂಪು ಕಿರಣಗಳು ಮುತ್ತಿಕ್ಕುತಾ ಮೈ ಮರೆತು ರಂಗೇರಿರಲು ಕೋಗಿಲೆ ತಂಪಲ್ಲಿ ಇಂಪಾಗಿ
ಕೂಗಲು ವಿರಹದಿ ದೂರ ಸರಿಯುವ ಸೂರ್ಯ
ದಗೆ ದಗಿಸುವನು ಸಂಜೆಯ ಸಂಧ್ಯಾ ಕಾಲದವರೆಗೆ .

ಯುಗ ಯುಗಗಳಿಂದ ಯುಗಾದಿಗೆ ಗಿಡ ಮರ
ಬಳ್ಳಿಗಳು ಎಲೆ ಉದುರಿಸಿ ಕೊಳೆ ತೊಳೆದುಕೊಳ್ಳುತಿರಲು,ಮನುಷ್ಯ ಮಾತ್ರ ಮತ್ಸರ,ದ್ವೇಷ ,ಅಸೂಯೆಯ ಎಲೆ ಕಳಚಿ ಪ್ರೀತಿ
ಪ್ರೇಮದ ಎಲೆ ಹೂ ಬಿಡುತ್ತಲೇ ಇಲ್ಲ!

ಯುಗ ಯುಗಗಳಿಂದ ಯುಗಾದಿಗೆ ಪ್ರಕೃತಿ
ಪ್ರೇಮದ ಪಾಠ ಹೇಳುತಲಿದ್ದರು,ಮನುಷ್ಯ
ಕಲಿಯಲಿಲ್ಲ, ಬದುಕಲಿ ಪ್ರೇಮದ ಹೂ ಬಿಡದೆ
ಕೊಪತಾಪದ ಬೆಂಕಿಯಲಿ ಬೇಯ್ಯುತಲಿರುವನು
ಕಲಿಯಬೇಕಿದೆ ಮನುಷ್ಯ ಪ್ರೇಮದ ಹೂ ಬಿಡುವುದ

ಶೇಖರ್. ಎಂ.ಸುರುಪೂರು

****************************************


ಹಸಿರ ಸೀಮಂತ


ಯುಗದ ಆದಿ ಯುಗಾದಿ
ಭುವಿಗೆ ಇನ್ನು ಹೊಸ ಕಾಂತಿ
ಹಸಿರ ಹೊತ್ತ ಗಿಡಮರಗಳು
ಹಾತೊರೆದು ಕಾಯುತಿವೆ
ನವ ಯುಗದ ಸ್ವಾಗತಕೆ.

ಕೋಗಿಲೆಗಳ ಇಂಚರದ
ಮಂಗಳಕರ ನಾದದಲಿ
ಭೂರಮೆಯು ಕೈ ಬೀಸಿ
ಕರೆಯುವಳು ನಮ್ಮನೆಲ್ಲ
ಹೊಸ ವರುಷದ ಹೊನಲಿಗೆ.

ಚೈತ್ರದಲಿ ಚಿಗುರೊಡೆದು
ಹೊಸ ಜನ್ಮವ ತಾ ತಳೆದು
ಹಸಿರಲ್ಲಿ ಮೊಗ್ಗಾಗಿ
ಮೊಗ್ಗುಗಳೆಲ್ಲ ಹೂವಾಗಿ
ಮಡಿಲಲ್ಲಿ ಫಲವ ಹೊತ್ತಿಹಳು .

ಹೆಣ್ಣೊಂದು ಬಸಿರಾಗಿ
ಸೀಮಂತಕೆ ಅಣಿಯಾದಂತೆ
ಹಸಿರೆಲ್ಲ ಬಸಿರಾಗಿ ನಿಂತು
ಸೀಮಂತ ತನಗೂ ಬೇಕೆಂದಿದೆ
ಈ ಯುಗಾದಿ ದಿನದಂದೇ.

ಸಹೋದರೆಲ್ಲ ಸೇರಬನ್ನಿ
ಸಹೋದರಿಯರನ್ನ ಜೊತೆ ಕರೆತನ್ನಿ
ಜಾತಿ , ಧರ್ಮ. ಭಾಷೆಗಳ ಭೇದ ತೊರೆದು
ಮಾಡೋಣ ಸೀಮಂತ ನಾವೆಲ್ಲ
ಫಲ ಹೊತ್ತ ಹಸಿರ ಸಿರಿ ದೇವಿಗೆ .

           
     ಮಹೇಂದ್ರ ಕುರ್ಡಿ
      ಹಟ್ಟಿ ಚಿನ್ನದ ಗಣಿ


******************************************

ಬಂತು ಯುಗಾದಿ

ಯುಗಾದಿ ಬಂತು ಹರುಷ ತಂತು
ಹೊಸ ಬದುಕಿನ ಹೊಸಗಾನಕೆ
ನಿಸರ್ಗ ಚೆಲುವ ಹೊಮ್ಮಿ ಬಂತು
ಹೊಸ ವರುಷದ ಹೊಸ ಸೃಷ್ಟಿಗೆ ||

ಸೃಷ್ಟಿ ಸೊಬಗು ಮನ ಸೆಳೆದಿದೆ
ಚಿಗುರು ಮೂಡಿ ಹಸಿರು ಚಿಮ್ಮಿದೆ
ಮಾವು ಬೇವು ಹೂವು ಕಾಯಿ
ಯುಗಾದಿ ಮಂತ್ರ ಜಪಿಸುತಿವೆ ||

ಮಾವು ಬೇವು ಒಂದುಗೂಡಿ
ಹೊಸ ಬದುಕಿಗೆ ಮೋಡಿ ಮಾಡಿವೆ
ಸುಖ ದುಃಖ ದ ಸಮ ಪ್ರಸಾದ
ಪ್ರತಿಜೀವಿಗೂ ಯುಗಾದಿ ನೀಡಿದೆ ||

ಮೊದಲ ಮಳೆಗೆ ಚಿಮ್ಮಿ ಬಂತು
ಎಲ್ಲೆಡೆಯೂ ಹಸಿರು ತೋರಣ
ಚೈತ್ರಗಾನ ಹಾಡಿ ನಲಿಯಲಿಂದು
ಕೋಗಿಲೆಗೆ ದ್ವನಿಯು ಮೂಡಿದೆ ||

ಬಾ ಯುಗಾದಿ ಬವಣೆ ನೀಗು
ಬರಡು ನೆಲದಿ ಹಸಿರ ನೀಡು
ಮೇಲು ಕೀಳು ಎಲ್ಲ ಕಳೆದು
ಸುಖ ದುಃಖ ಸಮರ ಸಾರು ||

ಸ್ವಾರ್ಥಿ ಮನುಜ ಇಳೆಯ ತನುಜ
ಅರಿಯಲಿಂದು ಪೃಥ್ವಿ ಮಹಿಮೆ
ಆಯುರಾರೋಗ್ಯ ಎಲ್ಲ ಪಡೆದು
ಅರಿವು ಜಗದಿ ಯುಗಾದಿ ತರಲಿ ||

=> ವೆಂಕಟೇಶ ಚಾಗಿ
ಲಿಂಗಸುಗೂರ

*****************************************

      ಬಾ ಯುಗಾದಿ ಮತ್ತೆ
              ವರದೇಂದ್ರ.ಕೆ ಮಸ್ಕಿ

ಸರಪಳಿಯ ಬಿಡಿಸುವ ಮೊನಚಂತೆ
ಹರಿದ ಸೂತ್ರಕೆ ನೂತನ ಬದುಕು ಕಟ್ಟೋಕೆ
ಮುರಿದ ಚಕ್ರಕೆ  ಉರುಳೊ ಹೆಗಲಾಗಿ
ಆದ ನಷ್ಟಕೆ ಗೆಲುವಾಗಿ
ಬಾಡಿದ ಟೊಂಗೆಯಲಿ ಟಿಸಿಲೊಡೆದು
ಅರಿವಿಲ್ಲದ ಬೀಜದೊಳಗೆ ಭರವಸೆಯ ಬೇರಾಗಿ
ಬಾ ಯುಗಾದಿ ಮತ್ತೆ

ಕಲ್ಲೊಳಗೆ ಹುಟ್ಟುವ ಸಸಿಯ ವಿಶ್ವಾಸ
ಕಾರ್ಮೋಡದೊಳಗಿನ ಜೀವಹನಿ
ಭುಗಿಲೆದ್ದ ಆಕ್ರೋಶದ ಕೆಂಗಣ್ಣಿನಲಿ
ನಿರಮ್ಮಳ
ಉದ್ವೇಗದಿ ತಲ್ಲಣಿಸೊ ತನುವಿಗೆ ತಂಪಾಗಿ
ಬಿಸಿಲ ಝಳಕೆ ಕಪ್ಪಾದ ರೈತನ ಕಣ್ಣಿಗೆ ಹಸಿರಾಗಿಚ
ಬಾ ಯುಗಾದಿ ಮತ್ತೆ

ವಿಧವೆ ಪಟ್ಟಕೆ ಚಟ್ಟ ಕಟ್ಟು
ಬಂಜೆ ಒಡಲಲಿ ಬಸಿರಾಗಿ
ಬಂಜರು ನೆಲದಿ ಮೊಳಕೆ ಘಟ್ಟಿ ನೆಲವ ಸೀಳಿಬಿಡುವ ಅಗಾಧ ಬಲವಾಗಿ
ಶಕ್ತಿಹೀನ ತನುವಲಿ ಚೈತನ್ಯದುರಿಯಾಗಿ
ಹುಳಿ ಹಿಂಡುವ ಹೃದಯದಿ ಸಿಹಿಯಾಗಿ
ಬೇವಿನೊಳಗಿನ ಕಹಿಗೆ ಬೆಲ್ಲದ ನಂಟಾಗಿ
ಬದುಕ ತೋರುವ ಬೆವರಿಗೆ ಛಲದ ಸೆಲೆಯಾಗಿ
ಬಾ ಯುಗಾದಿ ಮತ್ತೆ

ಕ್ಷೀಣಿಸುತ್ತಿರುವ ಹಕ್ಕಿ ಕುಲಕೆ
ಅವಸಾನದಂಚಿನ ಮೃಗಗಳಿಗೆ
ಸಂತಾನದ  ಯುಗಾದಿ
ಅಂಕಗಳಲ್ಲಿ ಸೋತ ಓದುಗ ಮನಗಳಗೆ
ಜ್ಞಾನದ ಯುಗಾದಿ
ಹಣದಿಂದ ಬಲಿತ ಪ್ರೀತಿವಂಚಿತಗೆ
ಒಲವಿನ ಯುಗಾದಿ
ಪ್ರೇಮ ವೈಫಲ್ಯದ ಹೃದಯಕೆ ವಿಫುಲ
ಅನುರಾಗದ ಯುಗಾದಿ
ಆದಿಯಾಗಿ ಅನಾದಿಯಾಗಿ ಪ್ರತಿ ಕ್ಷಣ ಕ್ಷಣಕೂ
ಕಹಿಯೊಳಗಿನ ಔಷಧಿಗುಣವಾಗಿ
ಬಾ  ಯುಗಾದಿ
ಬಾ ಯುಗಾದಿ ಮತ್ತೆ

********************************
 "ನಲಿವು ಮತ್ತೆ ಚಿಗುರಲು
     ಬರುತಿದೆ ಯುಗಾದಿ"

ಬರುತಿದೆ ಯುಗಾದಿ
ಬೇಕು-ಬೇಡದ ಸಂಬಂಧಗಳ
ಮಧ್ಯೆದಲ್ಲಿ ಸಿಲುಕಿ
ಇರಲಾರದೆ,ಹೊರಬರಲಾರದೆ
ಚಡಪಡಿಸುತ್ತಿರುವ ಮನಗಳಿಗೊಂದಿಷ್ಟು
ಸಾಂತ್ವಾನ ಹೇಳಲು
ಬರುತಿದೆ ಯುಗಾದಿ

ಬರುತಿದೆ ಯುಗಾದಿ
ಯುಗಗಳು ಅರಿವಿಲ್ಲದೆ ಕಳೆಯುತಿವೆ
ಮೈ-ಮನೆಗಳಷ್ಟೆ ಶೃಂಗಾರಗೊಳ್ಳುತ್ತಿವೆ
ಮನಸುಗಳ ಬಣ್ಣ ಮಾಸಿವೆ
ಮಾಸಿದ ಮನಗಳಿಗೊಂದಿಷ್ಟು
ಕಲರವಗಳ ರಂಗು ಕೊಡಲು
ಬರುತಿದೆ ಯುಗಾದಿ

ಬರುತಿದೆ ಮತ್ತೆ ಮತ್ತೆ ಯುಗಾದಿ
ಬೆಲ್ಲದಲ್ಲಿ ಬೇವನ್ನು ಬೆರೆಸಲಲ್ಲ
ಸಿಹಿಯಲ್ಲಿ ಕಹಿಯನ್ನು ಮರೆಸಲು
ನಗುವಿನ ಕಂಕುಳಲ್ಲಿ ನೋವಿನ
ಕಂದಮ್ಮನನ್ನು ಮುಚ್ಚಿಡಲು
ಬರುತಿದೆ ಯುಗಾದಿ

ಈಗಲೂ ಬರುತಿದೆ ಯುಗಾದಿ
ಕತ್ತರಿಸಿದಷ್ಟು ಚಿಗುರುವ ಚಿಗುರಿನಂತೆ
ಪ್ರತಿತುತ್ತಿನಲ್ಲು ನೋವುಂಡರು
ನಲಿವಿನ ಸಿಹಿಯ ಹಂಚಲು
ಆತ್ಮಸ್ಥೈರ್ಯದ ಬೇವು ಕುಡಿಸಿ
ಮನಗಳನ್ನು ಗಟ್ಟಿಯಾಗಿಸಲು
ಈಗಲೂ ಬರುತಿದೆ ಯುಗಾದಿ

ಮುಂದೆಯು ಬರುವುದು ಯುಗಾದಿ
ಮೈ-ಮನಗಳ ಕೊಳೆ ತೊಳೆದು
ತಳಿರು-ತೋರಣದ ಕಳೆ ಕಟ್ಟಿ
ಸಡಗರ-ಸಂಭ್ರಮದ ಮಳೆ ಸುರಿಸಿ
ನವ ಚೇತನದ ಬೆಳೆ ಬೆಳೆಯಲು
ಬರುತಿದೆ ಯುಗಾದಿ
ಬರುತಲಿರುವುದು ಮತ್ತೆ ಮತ್ತೆ ಯುಗಾದಿ

ವಿಜಯಲಕ್ಷ್ಮಿ.ಅಮರೇಗೌಡ.ಪಾಟೀಲ

No comments:

Popular Posts