ನನ್ನ ಅವಸ್ಥೆ
ನಾನು ಸಣ್ಣವನಿದ್ದೆ
ನನ್ನ ಊರು ತುಂಬಾ
ಹೊಲಸು ತುಂಬಿದ
ಒರಟು ಒರಟಾದ
ಒಂದಕ್ಕೊಂದು ಅಂಟಿದ
ಸಣ್ಣ ಸಣ್ಣ ಮನೆಗಳು..
ಸಂದಿಗೊಂದಿಗಳು..
ಸಹಜವಾಗಿಯೇ ಕೊಳಕಾಗಿರುವ
ಮೈ-ಬಟ್ಟೆಗಳು..
ಕಟ್ಟಿಗೆಯ ಒಲೆಯ ಮೇಲೆ
ಸುಟ್ಟರೂ,ಲಕಲಕ ಎನ್ನುವ
ಪುಟ್ಟಿ ತುಂಬಿರುವ ರೊಟ್ಟಿ...
ಮನೆ ಕಿರಿದಾದರೇನು?
ಹೊಲಸಿದ್ದರೇನು?
ಕರೆದುಣ್ಣುವ ಕಕ್ಕುಲತೆ
ಹಸಿವನ್ನೇ ಅಸ್ಪ್ರಶ್ಯ ವನ್ನಾಗಿಸಿತ್ತು.
ಸಣ್ಣದಾದರೇನು? ಕೊಳಕಾದರೇನು?
ನೆಲೆಯಿಲ್ಲದ ಬಾಳಿಗೆ
ಈ ಗೋಡೆಯೋ..ಗುಡಿ-ಗುಂಡಾರವೋ..
ನಿದ್ದೆಗೆ ಸೂರುಗಳಾದರೂ...
ನಿದ್ದೆಗೆಡಿಸುವ ದುಃಸ್ವಪ್ನ ಗಳಿಗೆ ಪ್ರವೇಶವಿರಲಿಲ್ಲ.
ದೊಡ್ಡದಾದ ಮನದ ಮುಂದೆ ಈ ಎಲ್ಲಾ ಗೊಡ್ಡುತನಗಳಿಗೆ ತಲೆಬಾಗಿ
ನಿಲ್ಲುವ ಶಿಕ್ಷೆ.
ನಾನು ದೊಡ್ಡವನಾದೆ
ಈಗ ನಾನಿರುವ ಊರೂ ದೊಡ್ಡದು..
ಮನೆಗಳು, ರಸ್ತೆಗಳು..
ಎಲ್ಲವೂ ಮಿಗಿಲಾದವು ಗಳು..
ಮುಗಿಲಂತೆ ಲಕಲಕ ಹೊಳೆಯುವಂಥವುಗಳು.
ಅನಿಲದುರಿಯ ಒಲೆಯಿಂದ
ಬೇಯಿಸಿದ ಕರಕಾದ
ಮೃಷ್ಟಾನ್ನ,ಮನೆಯ ಬಾಗಿಲನು ಮುಚ್ಚಿ
ವೈದ್ಯರ ಕಟ್ಟಪ್ಪಣೆಯ
ಚಾಚೂ ತಪ್ಪದೇ ಪಾಲಿಸಿ...
ಯಾವ ಗಣಿತವನ್ನೂ ಮರೆಯದೆ
ಭಕ್ಷ್ಯಭೋಜ್ಯಗಳ ತುತ್ತನ್ನರೆದು ....
ಡೇಗಿಗೂ ಅನುಮತಿಯನ್ನು ನಿರಾಕರಿಸಿದ ಹೈಟೆಕ್ ಜೀವನ....!
ಘಮ್ಮೆನ್ನುವ ಕೋಣೆಯಲ್ಲಿ
ಮೆತ್ತನೆಯ ಹಾಸಿಗೆಯಲಿ
ಶೇಷಶಯನ ನಾನೆಂದರೂ
ಆ ದೂರಿದ್ದಾರೆ ಸೊತ್ತಾಗಿದ್ದ ನಿದ್ರೆ ನಮ್ಮನು ಸದಾ ಎಚ್ಚರವಾಗಿರುವ ದೈವವನಾಗಿಸಿತು.
ಗರಿಗರಿಯ ಬಟ್ಟೆ,
ಹಾಲು ಚೆಲ್ಲುವ ನಗೆ
ಮಠ-ಮಂದಿರಗಳಲೂ
ರಿಂಗಣಿಸುವ ಬಿನ್ನಾಣ
ನಾಯಿ-ಬೆಕ್ಕು
ಕಾಗೆ-ಕೋಗಿಲೆಗಳನೂ
ಸೇರದಾಯಿತು.
ನಾನೀಗ ದಂಗಾಗಿಬಿಟ್ಟೆ.
ಹುಟ್ಟಿದೆ,ಬೆಳೆದೆ..
ಬದಲಾವಣೆಯ ಬೆಳೆಗೆ
ಅವಿರತ ದುಡಿದೆ
ಧನಿಕನಾದೆ..
ಹಾಗಾಗಿ ನಾನೀಗ ಪ್ರಕಾಶಿಸುತ್ತಿದ್ದೇನೆ
ಬೆಳಕನೂ ಸಹಿಸದಷ್ಟು
ಬಲಶಾಲಿಯಾಗಿದ್ದೇನೆ..
ವ್ಯಕ್ತಿತ್ವ ವಿಕಸನಕ್ಕೆ
ಭಾಷ್ಯವಾಗಿದ್ದೇನೆ.
-೦೦೦-
ಕೆ.ಶಶಿಕಾಂತ
ಡಾ.ಕೆ.ಶಶಿಕಾಂತ ರವರ ಇತರ ಕವನಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
No comments:
Post a Comment