ಶಿಕ್ಷಣ - ಸಾಹಿತ್ಯ
Tuesday, 21 May 2024
ಕವಿತೆ | ನಗುವಿನೊಂದಿಗೆ ಮಾತುಕಥೆ | ವೆಂಕಟೇಶ ಚಾಗಿ
**ನಗುವಿನೊಂದಿಗೆ ಮಾತುಕಥೆ**
ನಿಮ್ಮ ನಗುವಿನೊಂದಿಗೆ ನೀವು
ಮಾತನಾಡಿದ್ದೀರಾ...?
ಇಲ್ಲವೆಂದೆನಿಸುತ್ತಿದೆ ನಿಮ್ಮ ಮೌನದಿಂದ
ಹಾಗಾದರೆ ಈಗಲೇ ಮಾತನಾಡಿಬಿಡಿ
ನಿಮ್ಮ ನಗುವಿನೊಂದಿಗೆ;
ಮುಂದಿನ ಕ್ಷಣ ನಗುವಿನ ಜಾಗದಲ್ಲಿ
ಅಳು ಒಕ್ಕರಿಸಬಹುದು
ಯಾರು ಬಲ್ಲರು ನಿಮ್ಮ ನಗುವಿನ ಮರ್ಮವನ್ನು..!!
ಪಾಪ ನಗು ನಿಮಗಾಗಿ ಕಾಯುತ್ತಿದೆ
ಅದಕ್ಕೆ ಹಸಿವಿಲ್ಲ ನಿದ್ದೆಯಿಲ್ಲ ಕುಟುಂಬವಿಲ್ಲ
ನೀವೇ ಅದರ ಸರ್ವಸ್ವವೆಲ್ಲ
ನಿಮಗೋ ಮಾತನಾಡಲು ಪುರುಸೊತ್ತಿಲ್ಲ
ಮುಖದ ತುಂಬಾ ನೂರಾರು ಚಿಂತೆಗಳ
ಪೋಸ್ಟರ್ ಹಂಟಿಸಿಕೊಂಡಿದ್ದೀರಿ
ಪೋಸ್ಟರ್ ಓದುತ್ತಾ ಓದುತ್ತಾ
ನಗುವಿಗೆ ನಿರಾಶೆಯಾಗಿದೆ
ಆದರೂ ನಿಮಗಾಗಿ ಕಾಯುತ್ತಿದೆ ಹಗಲಿರುಳು..!!
ನಿಮ್ಮ ನಗು ಮಗುವಿನಂತೆ ನಗಬಲ್ಲದು
ಮಾಗಿದಂತೆ ಮುಸುಗುಟ್ಟಬಲ್ಲದು
ನಿಮಗಾಗಿ ಏನಾದರೂ ಮಾಡಬಲ್ಲದು
ನೀವು ನಗುವಿನೊಂದಿಗೆ ಮಾತನಾಡಬೇಕಷ್ಟೇ
ನಿಮ್ಮ ಮೌನದಲ್ಲಿಯೂ ನಗುವಿಗಿದೆ ಉಸಿರಾಟ
ನಿಮಗಾಗಿ ಸಾಯುವವರೆಗೂ ಕಾಯುವವರು
ಯಾರೂ ಇಲ್ಲದಿರಬಹುದು ನಗುವನ್ನು ಬಿಟ್ಟು
ನಿಮ್ಮ ಮಧುರ ಕ್ಷಣಗಳಲ್ಲಿ ನಿಮ್ಮ ನಗು
ಮತ್ತೆ ಮತ್ತೆ ನಗುತ್ತಿದೆ ನಿಮ್ಮೊಂದಿಗೆ ....!!
ಆ ಬಣ್ಣದ ಹಾಳೆಗಳಲ್ಲಿ , ಆ ಲೋಹದಲ್ಲಿ
ಆ ಮಾಯೆಯಲ್ಲಿ ಆ ಮಣ್ಣಿನಲ್ಲಿ
ನಿಮ್ಮ ನಗುವನ್ನು ನೀವೆ ಹುಡುಕುತಿದ್ದೀರಿ
ನಗುವಿಗಾಗಿ ದಿನದಿನವೂ ಮಡಿಯುತ್ತಿದ್ದೀರಿ
ಅಗೋ ನೋಡಿ,
ಹರಕು ಅಂಗಿಯ ತೊಟ್ಟ ಆ ಮಗು
ನಗುವಿನೊಂದಿಗೆ ಸರಸವಾಡುತ್ತಿದೆ
ಅಲ್ಲೊಬ್ಬ ನಗುವನ್ನೇ ನಗಿಸುವ
ಸಾಹಸಿಗನಾಗಿದ್ದಾನೆ..
ಆದರೆ ನಿಮ್ಮ ನಗು..?
ನೀವಿದ್ದೂ ಅನಾಥವಾಗಿದೆ..!!
ನಗುವಿನಿಂದೊಮ್ಮೆ ನಕ್ಕುಬಿಡಿ
ಇಲ್ಲವಾದರೆ ಜಗಳವಾಡಿಬಿಡಿ
ನಗುವಿಗೆ ನೀವೆಂದರೆ ಬೇಸರವಾಗಿಬಿಡಲಿ
ಆದರೆ ನಿಮ್ಮ ನಗುವಿಗೆ ನೀವೆ ಮರಣವಾಗದಿರಿ
ನಿಮ್ಮ ನಗು ಈಗಲೂ ಕಾಯುತ್ತಿದೆ
ನಿಮಗಾಗಿ;
ನಿಮ್ಮ ದಾಹದ ವೇಷವನ್ನು ಕಳಚಿಬಿಡಿ
ಅಪ್ಪಿಕೊಳ್ಳಿ ಗಟ್ಟಿಯಾಗಿ ನಗುವನ್ನೊಮ್ಮೆ
ಈಗ ಜಗತ್ತು ನಗುತ್ತಿದೆ ನಿಮ್ಮೊಂದಿಗೆ..!!
=>
ವೆಂಕಟೇಶ ಚಾಗಿ
(Comment on WhatsApp 9611311195)
Monday, 20 May 2024
ಕವಿತೆ | ಪೇಪರ್ ಹಾಕುವ ಹುಡುಗ | ವೆಂಕಟೇಶ ಚಾಗಿ
ಪೇಪರ್ ಹಾಕುವ ಹುಡುಗ
ಸುದ್ದಿಗಳ ಹೊತ್ತು ತರುತ್ತಾನೆ ಪ್ರತಿದಿನ
ಪೇಪರ್ ಹಾಕುವ ಹುಡುಗ
ಅವನೇನು ದೂರದವನಲ್ಲ
ನಮ್ಮವನೆ ನಮ್ಮೂರಿನವನೆ
ಸುಮಾರು ವರುಷಗಳ ಕಾಯಕ
ತಂದೆಯಿಂದ ಈಗ ಮಗ
ಅದೇ ಹಳೆ ಸೈಕಲ್ಲು
ಮತ್ತದೇ ಸಣ್ಣ ನಗು ಒಂದು ಮಾತು
ಅಪ್ಪನಿಂದ ಮಗನಿಗೆ
ವರ್ಗವಾಗಿದೆ ಅಷ್ಟೇ..
ಆತ ಹೊತ್ತು ತರುವ ಸುದ್ದಿಗಳಲ್ಲಿ
ಹಲವರು ದಿಢೀರನೆ ಶ್ರೀಮಂತರಾಗಿದ್ದಾರೆ
ಜನರಿಗೆ ಕೈಬೀಸಿ
ಕೆಲವರು ಜೈಲು ಸೇರಿ ಹೊರಬಂದು
ಇನ್ನೂ ಶ್ರೀಮಂತರಾಗಿದ್ದಾರೆ
ಅವರ ಶ್ರೀಮಂತಿಕೆಯ ಸುದ್ದಿಯನ್ನು
ಹೊತ್ತು ತಂದಿದ್ದಾನೆ
ಈತನಿಗೆ ಅಪ್ಪನಿಂದ ಬಡತನ
ಬಳುವಳಿಯಾಗಿ ಬಂದಿದೆ ಅಷ್ಟೇ..
ಕೋಟಿ ಕೋಟಿ ರೂಪಾಯಿಗಳ
ಯೋಜನೆಗಳ ಭರಪೂರದ ಸುದ್ದಿ
ಬರ ನೀಗಿಸುವ ಶಕ್ತಿ
ಇನ್ನೂ ನೀಗಿಲ್ಲ
ಅದೇ ತಗ್ಗು ಗುಂಡಿಗಳ ರಸ್ತೆಯ ಮೇಲೆ
ಸೈಕಲ್ ತಳ್ಳುತ್ತಿದ್ದಾನೆ
ಓದಲು ಹಣಕೊಡಲು ಆದೀತೇ
ಬದುಕು ಕಟ್ಟಲೇ ಬೇಕಲ್ಲ
ಉದ್ಯೋಗಿಯೋ ನಿರುದ್ಯೋಗಿಯೋ
ಅಪ್ಪನೇ ಹೇಳಬೇಕಷ್ಟೇ..
> ವೆಂಕಟೇಶ ಚಾಗಿ
(Comment on WhatsApp : 9611311195)
Sunday, 19 May 2024
ಕವಿತೆ | ಧರೆಯ ಮೇಲಿನ ಆಕಾಶಗಳು | ವೆಂಕಟೇಶ ಚಾಗಿ
**ಧರೆಯ ಮೇಲಿನ ಆಕಾಶಗಳು**
ಆಕಾಶ ತಾನು ಸ್ವಚ್ಛವಾಗಬೇಕು
ಎಂದುಕೊಂಡಿತು
ಅದಕ್ಕಾಗಿ ತನ್ನ ನೋವುಗಳನ್ನೆಲ್ಲಾ ನೆನೆದು
ಗಳಗಳನೇ ಅತ್ತುಬಿಟ್ಟಿತು
ದುಃಖ ತುಂಬಿದ ಮೋಡಗಳೆಲ್ಲಾ
ಆಕಾಶದ ಉಸಿರನ್ನೆಲ್ಲಾ ತಂಪುಗೊಳಿಸಿ
ಒಂದನ್ನೊಂದು ಸೇರಿ
ಬಿಗಿದಪ್ಪಿಕೊಂಡವು
ಮತ್ತೆ ಅಗಲಲಾರದಂತೆ ಮತ್ತೆಂದು;
ಆಕಾಶ ಕೋಪದಿಂದ ಗುಡುಗಿ
ಮನದಲ್ಲಿದ್ದ ಬೆಂಕಿಯ ಸಿಡಿಲನ್ನು
ಹೀರಿ ತೆಗೆದು ಹೊರಹಾಕಿತು
ಕಾರ್ಮೋಡಗಳೆಲ್ಲಾ ಕರಗಿದವು
ಎಲ್ಲವೂ ಶಾಂತ
ಆಕಾಶವೂ ಸಹ;
ಆಕಾಶದ ನೋವುಗಳೀಗ
ನೆಲದ ಮೇಲೆ ಎಲ್ಲೆಂದರಲ್ಲಿ ಬಿದ್ದಿವೆ
ಕೆಲವು ಮಾಳಿಗೆಯ ಮೇಲೆ
ಕೆಲವು ಕೆಲವರ ಮೇಲೆ
ಕೆಲವಂತೂ ಚರಂಡಿಯಲ್ಲಿ
ಇನ್ನೂ ಕೆಲವನ್ನು ಕೆಲವರು
ಗುಡ್ಡೆ ಹಾಕಿದ್ದಾರೆ ಆಣೆಕಟ್ಟುಗಳಲ್ಲಿ;
ನಾಕಂಡಂತೆ ಆಕಾಶದ ನೋವುಗಳನ್ನು
ಹೆಚ್ಚು ಬಾಚಿಕೊಂಡವಳೆಂದರೆ
ಅವ್ವ ಒಬ್ಬಳೇ;
ಹಾಗಾಗಿ ಅವಳ ಕಣ್ಣುಗಳೂ ಸಹ
ಆಕಾಶಗಳಾಗಿವೆ
ಎಲ್ಲವನು ಕಂಡು ಎಲ್ಲವನು ಉಂಡು;
ಈಗ ಯಾರು ಮಿಗಿಲು
ಈ ಇಬ್ಬರಲಿ ?
ಆಕಾಶವೋ ಅಥವಾ ಅವ್ವ ?
ಆಕಾಶ, ಎಲ್ಲವನೂ ಉಂಡು
ಎಲ್ಲವನೂ ಮತ್ತೆ ಮರಳಿಸಿ
ಸ್ವಚ್ಛವಾಗಿಬಿಡುತ್ತದೆ
ಆದರೆ ಧರೆಯ ಮೇಲಿನ ಆಕಾಶಗಳು
ಎಲ್ಲವನ್ನೂ ಉಂಡು ಉಂಡೂ
ತಾವು ಬೆಂಡಾಗುತ್ತವೆ ಮತ್ತಷ್ಟು ಬಾಗಿ;
ನೋವುಗಳು ಹೊರಬಂದದ್ದು
ಇನ್ನೊಂದು ನೋವನ್ನು ಕಂಡಾಗ ಮಾತ್ರ.
ಆದರೂ ಅವುಗಳನ್ನು
ಕಟ್ಟಿಹಾಕಲಾಗಿತ್ತು ಸೆರಗಿನಲ್ಲಿ
ಮತ್ತೆಲ್ಲೂ ಸೋರಿ ಹೋಗದಂತೆ..!!
=> ವೆಂಕಟೇಶ ಚಾಗಿ
Comment on WhatsApp : 9611311195)
Saturday, 18 May 2024
ಕವಿತೆ | ಆಕೆ | ವೆಂಕಟೇಶ ಚಾಗಿ
**ಆಕೆ***
ಆಕೆ ಅಂತಿಂತವಳಲ್ಲ
ಬಿಳಿಗೂದಲು ಅವಸರದಿಂದ
ಬಂದಿರಬಹುದೇನೋ,
ವಯಸ್ಸು ಅದೆಕೋ
ಅವಳ ಪಾಲಿಗೆ ಮಂದಗಾಮಿ
ಕಾಲುಗಳಂತೂ ಚಕ್ರಗಳೇ ಸರಿ
ಸುತ್ತುತ್ತವೆ ಅತ್ತಿತ್ತ ;
ಸದಾಕಾಲ.
ಜಗವ ಬೆಳಗುವ ಸೂರ್ಯನಿಗೆ
ಅವಳು ಆಪ್ತ ಪರಿಚಯದವಳು.
ಸೂರ್ಯನನ್ನೇ ಇವಳು
ಎಚ್ಚರಿಸುವಳೆನೋ
ಎನ್ನುವಂತೆ..!
ತಲೆಯ ಮೇಲೊಂದು
ಹಸಿವ ನೀಗಿಸುವ
ತರತರದ ಕಾಯಿಪಲ್ಯ ಬುಟ್ಟಿ
ಹಸಿವು ಅವಳದೂ ಆಯ್ತು
ಮತ್ತೆ
ಕೊಳ್ಳುವವರದ್ದೂ ಇರಬಹುದು ;
ತಲೆಗೂ ರೂಢಿ ಆದಂತಿದೆ
ಭಾರ ಹೊತ್ತು ಹೊತ್ತು.!
ಹನಿ ಸುರಿಯುವುದಂತೂ ನಿಜ
ಆಗಾಗ ಮಳೆಯಾಗಿ ಬೆವರಾಗಿ.
ಗಳಿಸಿದ್ದು ನಾಲ್ಕು ಮನಸುಗಳು
ಮತ್ತೆ ನಾಲ್ಕು ಕಾಸು;
ಗುಣಿ ಸೇರಿದ್ದ ಅವ್ವ ಕೊಟ್ಟ
ಸೀರೆಗೂ
ಇವಳೆಂದರೆ ಬಿಟ್ಟು ಬಿಡದಷ್ಟು ಇಷ್ಟ.
ಸ್ವಾಭಿಮಾನದ ಉಡುಗೆಯಂತೂ
ತೊಟ್ಟು ಹಳೆಯದಾಗಿದೆ.!
ಬೆಟ್ಟದಂತೆ ಅಲ್ಲದಿದ್ದರೂ
ದಿನ್ನೆಗಳಂಥ ಕನಸುಗಳೂ
ಅವಳ ಸುತ್ತ ಸುಳಿದಿಲ್ಲ.
ಅದೆಷ್ಟೋ ಬಾರಿ ಹಸಿವ
ನೂಕಿದರೂ
ಮತ್ತೆ ಮತ್ತೆ ಅದರದೇ ನಂಟು
ಆಪ್ತ ಬಡತನದೊಂದಿಗೆ..!
ದೇವರಿಗೆ ಒಂದಿಷ್ಟು
ಲಂಚಕೊಟ್ಟು ಕೇಳಿದ್ದರೂ
ಹುಟ್ಟಬಹುದಿತ್ತು ಒಂದೆರಡು ಹೂಗಳು
ಅವಳ ಒಡಲೊಳಗೆ;
ಎಲ್ಲ ಗಡಿಗಳ ದಾಟಿ
ಅರಿವಿಲ್ಲದೆ ಮುಂದೆ ಸಾಗಿದೆ
ರವಿಯೊಂದಿಗೆ
ಮೂಡಣದ ಕಡೆಗೆ..!
=> ವೆಂಕಟೇಶ ಚಾಗಿ
Comment on WhatsApp : 9611311195)
Sunday, 14 April 2024
simple division - step 20 - ಸರಳ ಭಾಗಾಕಾರ
Fjn
Gj
simple division 19 - step 19 - ಸರಳ ಭಾಗಾಕಾರ
Fhj
Bnj
simple division 18 - step 18 - ಸರಳ ಭಾಗಾಕಾರ
Ghh
Hj
Newer Posts
Older Posts
Home
Subscribe to:
Posts (Atom)
LBA Question papers | orders | formats | vktworld
👉 LBA ORDERS ಆದೇಶಗಳು 👉 Question papers Header Cell Cell ...
ಅರ್ಜಿ ಆಹ್ವಾನ | ವಿವಿಧ ಪ್ರಶಸ್ತಿಗಳು | ಸ್ಪರ್ಧೆಗಳು | ಪ್ರಕಟಣೆಗಳು | aplication call for compitations - awards - books
ಕಗ್ಗಗಳು | ಮಕ್ಕಳ ಕವನಗಳು | ಮಕ್ಕಳ ಕಥೆಗಳು | ಹನಿಗವನಗಳು | ಗಜಲ್ ಗಳು | ಹಾಯ್ಕುಗಳು | ಕವನಗಳು | ಕವಿತೆಗಳು | 👉ವಿಜಯವಾಣಿ ಓದುಗರ ವೇದಿಕೆಗೆ ...
Murarji question paper 4 - 2024
SCHOOL - ಶಾಲಾ ಉಪಯುಕ್ತ Age calculator No Bag day ನಾವು ಮನುಜರು ಗಣಿತ ಗಣಕ 21 ದಿನಗಳ ಓದು 100 ದಿನಗಳ ಓದು FLN PROGRAM ಕಲಿಕಾ ಹಬ್ಬ ಪ್ರೇರಣಾ ಕ್ಲಬ್ ಸಚೇ...
Murarji question paper 3 - 2025
SCHOOL - ಶಾಲಾ ಉಪಯುಕ್ತ Age calculator No Bag day ನಾವು ಮನುಜರು ಗಣಿತ ಗಣಕ 21 ದಿನಗಳ ಓದು 100 ದಿನಗಳ ಓದು FLN PROGRAM ಕಲಿಕಾ ಹಬ್ಬ ಪ್ರೇರಣಾ ಕ್ಲಬ್...