ನನ್ನ ಮರ
ನಾನು ಬೆಳೆದ ಮರವು
ಒಂದು ಹಣ್ಣು ಬಿಟ್ಟಿದೆ
ಹಣ್ಣು ತಿನ್ನ ಬಯಸಿ
ಹಕ್ಕಿಯೊಂದು ಹಾರಿಬಂದಿದೆ ||
ಗುಬ್ಬಿ ಗಿಜಗ ಗಿಳಿಗಳೆಲ್ಲ
ಗೂಡ ಬಯಸಿ ಬಂದಿವೆ
ಕಡ್ಡಿ ಎಲೆಯ ಒಟ್ಟು ಮಾಡಿ
ಚಂದವಾದ ಗೂಡು ಕಟ್ಟಿವೆ ||
ಹಕ್ಕಿಗಳಿಗೆ ಕುಡಿಯಲೆಂದು
ಬಟ್ಟಲಲ್ಲಿ ನೀರು ಇಟ್ಟರೆ
ಹಾರಿಬಂದ ಹಕ್ಕಿ ಪಕ್ಷಿ
ನೀರಕುಡಿದು ದಣಿವ ಕಳೆದಿವೆ ||
ಮರದ ಬುಡದ ನೆರಳಿನಲ್ಲಿ
ಬೆಳಕು ಗೆಜ್ಜೆ ಹಾಕಿದೆ
ಓದಲೆಂದು ಕುಳಿತಮೇಲೆ
ತಂಪಾದ ಗಾಳಿ ಬೀಸಿದೆ ||
ನನ್ನ ಬಳಗ ಗೆಳೆಯರೆಲ್ಲ
ಬರುವರಿಲ್ಲಿ ಆಟವಾಡಲು
ಮಣ್ಣಿನಲ್ಲಿ ಮನೆಯ ಕಟ್ಟಿ
ಮದುವೆ ಮಾಡಿ ನಲಿವೆವು ||
ಬೆಳೆಸಿ ನೀವು ಮರಗಳನ್ನು
ನನ್ನ ಹಾಗೆ ಹಕ್ಕಿಗಳನು
ಉಳಿಸಬೇಕು ಪರಸರವ
ಹೊಂದಬೇಕು ಹರುಷವ ||
=> ವೆಂಕಟೇಶ ಚಾಗಿ
No comments:
Post a Comment