ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld ಎಂದು search ಮಾಡಿ

Sunday 7 August 2022

Sahitya / makkala sahitya / makkala kathe / children story / ಮಕ್ಕಳ ಕಥೆ / ಸಿಂಹ ಮತ್ತು ಬುದ್ದಿವಂತ ಜಿಂಕೆ - ವೆಂಕಟೇಶ ಚಾಗಿ / venkatesh chagi / #vktworld #shaale #ಶಾಲೆ


**ಸಿಂಹ ಮತ್ತು ಬುದ್ದಿವಂತ ಜಿಂಕೆ**





ಬೋಧವನ ಎಂಬ ದಟ್ಟವಾದ  ಅರಣ್ಯದಲ್ಲಿ ಅನೇಕ ಬಗೆಯ ಪ್ರಾಣಿ ಪಕ್ಷಿಗಳು ಸ್ವಚ್ಛಂದವಾಗಿ ಜೀವಿಸುತ್ತಿದ್ದವು. ಅಲ್ಲಿ ಮಾನವರ ಚಲನ ವಲನ ಇಲ್ಲದಿದ್ದರಿಂದ ಯಾವುದೇ ಪ್ರಾಣಿಗಳಿಗೆ ಭಯ ಇರಲಿಲ್ಲ. ಸುಂದರವಾದ ಜಲಪಾತಗಳು,  ಕೊಳಗಳು  , ನಿತ್ಯಹರಿದ್ವರ್ಣ ಕಾಡುಗಳು ಕಾಡಿನ ಸೊಬಗನ್ನು ಹೆಚ್ಚಿಸಿದ್ದವು. ಕಾಡಿನ ಎಲ್ಲಾ ಜೀವಿಗಳು ಕಾಡಿನ ನಿಯಮಗಳಿಗೆ ಒಳಪಟ್ಟು ತಮ್ಮದೇ ಆದ ಸಂಸಾರದೊಂದಿಗೆ ಸುಖವಾಗಿ ಜೀವಿಸುತ್ತಿದ್ದವು

ಬೋಧವನ ದಟ್ಟ ಅರಣ್ಯದಲ್ಲಿ ಉಗ್ರಜ ಎಂಬ ಸಿಂಹ ವಾಸಿಸುತ್ತಿತ್ತು. ಉಗ್ರಜನು ಬೋಧವನದಲ್ಲಿ ತಾನೇ ರಾಜನೆಂದು ಹೇಳಿಕೊಳ್ಳುತ್ತಾ ದುರಹಂಕಾರದಿಂದ ನಡೆದುಕೊಳ್ಳುತ್ತಿತ್ತು. ಪ್ರಾಣಿಗಳಿಗೆ ವಿನಾಕಾರಣ ಚಿತ್ರಹಿಂಸೆ ನೀಡುವುದು, ಹಸಿವಿಲ್ಲದಿದ್ದರೂ ಪ್ರಾಣಿಗಳನ್ನು ಕೊಂದು ಹಾಕುವುದು, ತನ್ನ ಮಾತು ಕೇಳದ ಪ್ರಾಣಿಗಳಿಗೆ ಹಿಂಸೆ ನೀಡುವುದು, ಮೋಸದಿಂದ ಪ್ರಾಣಿಗಳನ್ನು ಹಿಡಿಯುವುದು ಹೀಗೆ ಕಾಡಿನ ಪ್ರಾಣಿಗಳಿಗೆ ಉಗ್ರಜ ಸಿಂಹವು ತಲೆನೋವಾಗಿ ಪರಿಣಮಿಸಿತ್ತು. ಬೇರೆ ಸಿಂಹಗಳು ಉಗ್ರಜನಿಗೆ ಬುದ್ಧಿವಾದ ಹೇಳಿದರೂ ತನಗೆ ಬುದ್ಧಿವಾದ ಹೇಳುವ ಗೆಳೆಯರ ಜೊತೆ ಅಥವಾ ಇತರ ಪ್ರಾಣಿಗಳೊಂದಿಗೆ ಜಗಳವಾಡುತ್ತಿತ್ತು. ಇದರಿಂದ ಉಗ್ರಜನಿಗೆ ಯಾರೂ ಬುದ್ಧಿವಾದ ಹೇಳಲು ಮುಂದೆ ಬರಲಿಲ್ಲ. ಎಲ್ಲರೂ ಉಗ್ರಜನಿಂದ  ದೂರವೇ ಉಳಿದು ಬಿಡುತ್ತಿದ್ದರು.



ಉಗ್ರಜನು ಜಿಂಕೆಗಳ ಹಿಂಡು ಕಂಡರೆ ಜಿಂಕೆಗಳಿಗೆ ತುಂಬಾ ತೊಂದರೆ ಕೊಡುತ್ತಿದ್ದನು. ಜಿಂಕೆಗಳಲ್ಲಿ ಹಿರಿಯ ಜಿಂಕೆಯೊಂದು ತನ್ನ ಎಲ್ಲಾ ಬಂಧುಗಳನ್ನು,  ಗೆಳೆಯರನ್ನು ಕರೆದು, " ಮಿತ್ರರೆ, ಉಗ್ರಜನಿಂದಾಗಿ ನಮ್ಮ ನೆಮ್ಮದಿ ಹಾಳಾಗುತ್ತಿದೆ . ಇತರ ಸಿಂಹಗಳಂತೆ ಉಗ್ರಜ  ನಡೆದುಕೊಳ್ಳದೇ ದುರಹಂಕಾರಿಯಾಗಿ ಮೆರೆಯುತ್ತಿದ್ದಾನೆ. ನಾವೆಲ್ಲ ಸೇರಿ ಉಗ್ರಜನಿಗೆ ತಕ್ಕ ಪಾಠ ಕಲಿಸಬೇಕು. ಪಾಠ ಕಲಿಸಲು ಯಾರಾದರೂ ಬಂದರೆ ಅವರಿಗೆ ನಮ್ಮೆಲ್ಲರ ಸಹಕಾರ ನೀಡಲಾಗುವುದು" ಎಂದತು. ಜಿಂಕೆಗಳಲ್ಲಿ ಯಾರೂ ಕೂಡ ಉಗ್ರಜನಿಗೆ ಪಾಠ ಕಲಿಸಲು ಮುಂದೆ ಬರಲಿಲ್ಲ. ಆದರೆ ಸುಮುಖ ಎಂಬ ಬುದ್ದಿವಂತ ಜಿಂಕೆ ಮುಂದೆ ಬಂದು, " ಹಿರಿಯರೇ,  ಉಗ್ರಜನಿಗೆ ಪಾಠ ಕಲಿಸಲು ನನ್ನ ಬಳಿ ಒಂದು ಉಪಾಯವಿದೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ" ಎಂದಿತು. ಎಲ್ಲರೂ ಸುಮುಖನಿಗೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಮರುದಿನ ಸುಮುಖ ಉಗ್ರಜನಿಗೆ ಕಾಣುವಹಾಗೆ ಉಗ್ರಜನ ಬಳಿಬಂದು ದೂರದಲ್ಲಿ ಗಿಡದ ಎಲೆಗಳನ್ನು ತಿನ್ನತೊಡಗಿತು. ಉಗ್ರಜನು ಒಳ್ಳೆಯ ಬೇಟೆಯ ದೊರಕಿತೆಂದು ಸುಮುಖನನ್ನು ಹಿಡಿಯಲು ಓಡಿಬಂದನು. ಸುಮುಖ ತಕ್ಷಣ ಓಡಿಹೋಗತೊಡಗಿದನು. ಸುಮುಖ ಹಾಗೂ ಉಗ್ರಜ ಬಹುದೂರ ಓಡಿದರು. ಉಗ್ರಜನಿಗೆ ಸುಮುಖ ಸಿಗಲೇ ಇಲ್ಲ. ಉಗ್ರಜನಿಗೆ ಸಿಟ್ಟು ಬಂದಿತು. ಸುಮುಖನನ್ನು ಹಿಡಿಯಲೇಬೇಕು ಎಂದು ಪಣತೊಟ್ಟು ಶಕ್ತಿಮೀರಿ ಮತ್ತೆ ಓಡತೊಡಗಿತು. ಸುಮುಖ ಓಡುತ್ತಾ ಓಡುತ್ತಾ ಒಂದು ಆಳವಾದ ಬಾವಿಯ ಬಳಿಬಂದು ಉಗ್ರಜನಿಗೆ ಗೊತ್ತಾಗದಂತೆ ದಾಟಿತು. ಉಗ್ರಜನಿಗೆ  ಆಳವಾದ ಬಾವಿ ಇರುವುದು ಗೊತ್ತಾಗದೆ ಬಾವಿಯಲ್ಲಿ ಬಿದ್ದುಬಿಟ್ಟಿತು. ಆಳವಾದ ಬಾವಿಯಿಂದ ಉಗ್ರಜನಿಗೆ ಮೇಲೆ ಬರಲು ಆಗಲಿಲ್ಲ.
ಆಗ ಸುಮುಖ , " ಉಗ್ರಜ , ನಿನ್ನ ದುರಹಂಕಾರಕ್ಕೆ ಇದುವೇ ಸರಿಯಾದ ಶಿಕ್ಷೆ . ಅನುಭವಿಸು. " ಎಂದು ಹೇಳಿ ಹೊರಟು ಹೋಯಿತು. ಕಾಡಿನ ಪ್ರಾಣಿಗಳೆಲ್ಲಾ ಬುದ್ದಿವಂತ ಸುಮುಖನ ಬುದ್ದಿವಂತಿಕೆಗೆ ಶಹಬ್ಬಾಷ್ ಎಂದರು. 

=> ವೆಂಕಟೇಶ ಚಾಗಿ

No comments:

Post a Comment

Popular Posts

ಪ್ರಚಲಿತ ಪೋಸ್ಟ್‌ಗಳು