Friday, 20 April 2018

Sahitya / kavana / kavite / ಕವಿತೆ / ಕೆಟ್ಟು ಹೋಗಿದೆ ರಸ್ತೆ - ವೆಂಕಟೇಶ ಚಾಗಿ / venkatesh chagi / #vktworld #shaale #ಶಾಲೆ



**ಕೆಟ್ಟು ಹೋಗಿದೆ ರಸ್ತೆ**

ಕೆಟ್ಟು ಹೋಗಿದೆ ರಸ್ತೆ
ತಗ್ಗು ಗಳಿಂದ
ಕೊರೆತಗಳಿಂದ
ಡಾಂಬಾರು ಮಾಯವಾಗಿ
ಕಲ್ಲುಗಳೆಲ್ಲ ಕಿತ್ತು
ಬದಿಯೆಲ್ಲಾ ಕೊರಕಿನಿಂದ
ಕೆಟ್ಟು ಹೋಗಿದೆ ರಸ್ತೆ
ಬಹುದಿನಗಳಿಂದ..||

ಎಲ್ಲಿಂದಲೋ ತಂದ
ಬೆಂಚು ಕಲ್ಲುಗಳ ಹರಡಿ
ಕೆಂಪು ಮಣ್ಣಿನ
ಹೊದಿಕೆ ಹಾಸಿ
ಆಗಾಗ ಹಸಿಯಾಗಿಸಿ
ಡಾಂಬಾರು ಬಳಿದು
ಚಂದವಾಗಿಸಿದ್ದ ರಸ್ತೆ
ಗಟ್ಟಿತನವಿಲ್ಲದೆ
ಕೆಟ್ಟು ಹೋಗಿದೆ ಮತ್ತೆ
ಬಹುದಿನಗಳಿಂದ..||

ಬಿಸಿಲ ಬೇಗೆ ತಾಳದೆ
ಕಲ್ಲುಗಳು ಹೊರಬಂದು
ಮೊದಲ ಮಳೆಗೆ ಮಣಿದು
ಡಾಂಬಾರು ಅಳಿದು
ಬಿರುಗಾಳಿಯ ಬಿರುಸಿಗೆ
ಮಣ್ಣೆಲ್ಲ ಹುಡಿಯಾಗಿ
ಹರಿವ ಝರಿಯ
ಕೊರೆತಕೆ ಸಿಲುಕಿ
ಕೆಟ್ಟುಹೋಗಿದೆ ರಸ್ತೆ
ಬಹುದಿನಗಳಿಂದ..||

ಎಷ್ಟು ಸುರಿದರೂ ಅಷ್ಟೇ
ಅನುದಾನ
ಬಹು ಲೋಬಿ ಈ ರಸ್ತೆ
ಅದಕೆ ಮಾಡಬೇಕು
ಆಗಾಗ ಸಮಾದಾನ
ಪ್ರತಿ ವರುಷ ಕೆಡಬೇಕಿದೆ
ಕಾಂಟ್ರಾಕ್ಟ್ ಮಹಾಶಯರಿಗೆ
ಮತ್ತೆ ಮತ್ತೆ ಸರಿಪಡಿಸಲು
ಕೆಟ್ಟುಹೋಗಿದೆ ರಸ್ತೆ
ಬಹುದಿನಗಳಿಂದ..||


✍ ವೆಂಕಟೇಶ ಚಾಗಿ
ಲಿಂಗಸುಗೂರ

Thursday, 5 April 2018

Sahitya / kavana / kavite / ಕವಿತೆ / ಬಾಡಿಗೆ ಸೈಕಲ್ - ವೆಂಕಟೇಶ ಚಾಗಿ / venkatesh chagi / #vktworld #shaale #ಶಾಲೆ


**ಬಾಡಿಗೆ ಸೈಕಲ್**


ಕರೀಮನ ಅಂಗಡಿಯಿಂದ
ಐದು ರೂಪಾಯಿಗೆ
ತಂದ ಬಾಡಿಗೆ ಸೈಕಲ್ಲು
ಕುಂಟುತ್ತಾ ಕುಂಟುತ್ತಾ
ಓಡಿಸಿ ಬೀಳಿಸಿ
ಕಲಿತಿದ್ದೆ ಒಕ್ಕಲು,
ಸುಮ್ ಸುಮ್ಮನೆ ಹಾಕಿ ಬೆಲ್ಲು
ಅದೇನೋ ಖುಷಿಯ ಗುಲ್ಲು
ಗ್ರೌಂಡು ತುಂಬಾ ಓಡಿ
ಓಡಿಸಿದರೂ
ಗಮನಿಸಲಿಲ್ಲ ಹೊಟ್ಟೆಯ
ಹಸಿವು...
ಸಣ್ಣ ಸಣ್ಣ ಕಲ್ಲುಗಳ ಮೇಲೆ
ಹಾರಿ ಜಿಗಿದು ನಡೆದರೂ
ಚುಚ್ಚಿದ್ದು ನೆನಪಿಸಲಿಲ್ಲ
ಬರಿಯ ಕಾಲುಗಳು..
ಸೀಟಿನ ಮೇಲೆ ಕೂತು
ಓಡಿಸುವ ತವಕ
ಆದರೂ
ಹಂತ ಹಂತವಾಗಿ
ಕಲಿಯುವ ಪುಳಕ..
ಗ್ರೌಂಡಿನ ಎಲ್ಲೆಡೆ ಗಾಲಿಯ
ಗೆರೆಗಳು ಬರೆಗಳು..
ಕೈ ಕಾಲು ಕೆತ್ತದರೂ
ಬಾಡಿಗೆ ಮುಗಿದೀತು
ಅದರೊಳಗೆ ಪೆಡಲ್ ತುಳಿತ..
ಕಲಿತು ಬಿಟ್ಟೆ ಅಲ್ಪ ಸ್ವಲ್ಪ
ಆದರೂ ಅದೆಷ್ಟು ಖುಷಿ
ಈಗ ಹಣ ಎಷ್ಟೋ
ಮರೆಯಾಗಿಲ್ಲ ಕರೀಮನ
ಬಾಡಿಗೆ ಸೈಕಲ್ ನ ಪಸೆ..||

✍ ವೆಂಕಟೇಶ ಚಾಗಿ
ಲಿಂಗಸುಗೂರ

@@@@@@@@@@@@@@@@@@@@@@@

#ಪುಟ್ಕತೆ - ಬೈಕ್

 ಆ ದಿನ ನನಗೆ ತುಂಬಾ ಹಸಿವಾಗಿತ್ತು . ಮಾಲಿಕನೋ ತನ್ನ ಹೊಟ್ಟೆಗೆ ಎಣ್ಣೆ ಸೇರಿಸಿ ನನ್ನ ಮೇಲೆ ಸವಾರಿ ಮಾಡುತ್ತಾ ತನ್ನ ಮನೆ ಕಡೆ ನಡೆಯುತ್ತಿದ್ದ. ನನ್ನಲ್ಲಿ ಇದ್ದ ಬದ್ದ ಎಣ್ಣೆಯನ್ನೆಲ್ಲಾ ಬಳಸಿ ಸ್ವಲ್ಪ ದೂರ ಓಡಿದೆ.ಆದರೆ ನನಗೂ ಒಂದು ಲಿಮಿಟ್ ಇದೆ ಅಲ್ವೆ.. ಸ್ವಲ್ಪ ದೂರದಲ್ಲಿ ಅರ್ಧ ದಾರಿಯಲ್ಲೇ ನಿಂತುಬಿಟ್ಟೆ . ನನ್ನ ಮಾಲಿಕನಿಗೆ ಅದೆಲ್ಲಿತ್ತೋ ಸಿಟ್ಟು  ನನ್ನ ಮೇಲಿಂದ ಇಳಿದವನೇ 3-4 ನನಗೆ ಒದ್ದ. ತನ್ನ ಭಾಷೆಯಲ್ಲಿ ನನಗೆ ಅದೇನೋ ಬೈದ. ನನಗಂತೂ ಅರ್ಥವಾಗಲಿಲ್ಲ.. ನನ್ನದೇನು ತಪ್ಪಿದೆ ? ನೀವೆ ಹೇಳಿ. ನನ್ನ ಮಾಲಿಕ ತಾನು ಮಾತ್ರ ಎಣ್ಣೆ ಹಾಕಿ ನನಗೆ ಹಾಕದಿದ್ದರೆ ಹೇಗೆ .? ನನಗೆ ಆಹಾರ ಎಂದರೇನೆ ಎಣ್ಣೆ..
ಪಾಪ ನನ್ನ ಮಾಲಿಕ ಸ್ವಲ್ಪ ದೂರ ನನ್ನನ್ನು ತಳ್ಳುತ್ತಾ ಸಾಗಿದ. ಅಷ್ಟರಲ್ಲಿ ಯಾರೋ ಒಬ್ಬರು ನನ್ನ ಮಾಲಿಕನ ಗೆಳೆಯರು ನನಗೆ ಸ್ವಲ್ಪ ಎಣ್ಣೆ ಯನ್ನು ದಾನವಾಗಿ ನೀಡಿದರು. ಅಷ್ಟನ್ನೇ ಸೇವಿಸಿ ನನ್ನ ತಾತ್ಕಾಲಿಕ ಹಸಿವನ್ನು ನೀಗಿಸಿಕೊಂಡೆ.

 ನನ್ನ ಮಾಲಿಕನಿಗೆ ಸಮಯವಾಗಿತ್ತೋ ಏನೋ ನನ್ನ ಮೇಲೇರಿ ತುಂಬಾ ವೇಗವಾಗಿ ಹೊರಟ. ನಾನು ನಿದಾನವಾಗಿ ಹೋಗು ಎಂದರೆ ಅವನು ಕೇಳಿಯಾನೇ. ಅವನು ಹೇಳಿದಂತೆ ನಾನು ವೇಗವಾಗಿ ಚಲಿಸಿದೆ. ಅದೆಂತಹ ಕೆಟ್ಟ ರಸ್ತೆ ಅಂದರೆ ನನ್ನ ಕಾಲುಗಳಿಗೆ ಮೈಗೆ ತುಂಬಾ ನೋವಾಗಿತು . ಆದರೂ ನನ್ನ ಮಾಲಿಕ ವೇಗವಾಗಿ ಹೋಗಲು ಹೇಳುತ್ತಿದ್ದ. ಅವನು ನನ್ನ ಮೇಲೆ ಸವಾರಿ ಮಾಡುವ ರೀತಿ ನೋಡಿ ನಾನೆಲ್ಲಿ ಬೀಳುವೆನೋ ಎಂದು ಭಯವಾಗುತ್ತಿತ್ತು. ಆದರೇನು ನನ್ನ ಹಣೆಬರಹ ಅಷ್ಟೇ ಇದ್ದಂತೆ ಕಾಣುತ್ತದೆ. ಮಾಲಿಕ , ಎದುರಿಗೆ ಬರುತ್ತಿದ್ದ ಲಾರಿಗೆ ನನ್ನನ್ನು ಗುದ್ದಿಸಿದ್ದ. ನಾನಂತು ಚೂರು ಚೂರಾದೆ. ನನ್ನ ಮಾಲಿಕನೋ ಅವನಿಗೂ ಅದೇ ಗತಿ. ಅಲ್ಲಿಗೆ ನನ್ನ ಕಥೆ ಮುಗಿದಿತ್ತು. ಇದರಲ್ಲಿ ನನ್ನದೇನು ತಪ್ಪು‌‌.? ನೀವೆ ಹೇಳಿ..!!


✍ ವೆಂಕಟೇಶ ಚಾಗಿ
ಲಿಂಗಸುಗೂರ
Visit vcsahitya.blogspot.in

MDM ONLINE ATTENDANCE step by step

  STEP 1 download below two apps 1) SATS MDM APP👇👇 https://play.google.com/store/apps/details?id=com.ictinfra.stsmdm 2) SATS KARNATAKA APP...