***ದೇವರೇ, ನೀನೆಷ್ಟು ಒಳ್ಳೆಯವನು..!!**
ದೇವರೇ,
ನಿನ್ನ ಸ್ವರ್ಗವನ್ನು ನಾವೀಗ
ಆಧುನಿಕವಾಗಿ ಬದಲಾಯಿಸಿದ್ದೇವೆ
ಕಾಂಕ್ರೀಟ್ ಕಾಡುಗಳು
ಅಗಲವಾದ ಉದ್ದವಾದ ರಸ್ತೆಗಳು
ಮಣ್ಣು ಕಾಣದ ಕೆಂಪು ಹಾಸು
ಆಕಾಶಕ್ಕೆ ಕಪ್ಪು ಬಣ್ಣ
ಗಾಳಿಗಿಷ್ಟು ಸುಗಂಧ ದ್ರವ್ಯ
ಎಲ್ಲವೂ ಸುಂದರ ನಮಗಾಗಿ
ಎಲ್ಲವನ್ನೂ ನೋಡಿ
ನಗುತ್ತಲೇ ಇರುವೆ
ದೇವರೇ, ನೀನೆಷ್ಟು ಒಳ್ಳೆಯವನು..!!
ನಿನ್ನ ಮನೆ ಈಗ
ಸಾವಿರಾರು ಮನೆಗಳು
ಧರ್ಮಕ್ಕೆ, ಜಾತಿಗೆ , ಕ್ರಾಂತಿಗೆ;
ಗಡಿಗಳೊಳಗೆ ನೀನು ನಾವು ಬಂಧಿ
ಗಡಿಯಾಚೆಗಿನ ನೋವು ಹಸಿವು
ಖಂಡಿತ ನಮ್ಮದಲ್ಲ
ಗಡಿದಾಟಿ ಹಾರುತ್ತಿವೆ
ಮೂರ್ಖ ಹಕ್ಕಿಗಳು ನಕ್ಷತ್ರಗಳು
ಎಲ್ಲದಕ್ಕೂ ನಿನ್ನ ಮೌನವೇ ಉತ್ತರ
ದೇವರೇ, ನೀನೆಷ್ಟು ಒಳ್ಳೆಯವನು..!!
ಪ್ರಾಣಿಗಳೆಲ್ಲಾ ದೇಹ ಹೊಕ್ಕಿವೆ
ನೈತಿಕತೆಯ ಹೆಸರಿನಲ್ಲಿ
ಸ್ವಾರ್ಥದ ಕೆಸರು ಗಟ್ಟಿಯಾಗಿದೆ
ಎಲ್ಲವೂ ನಿನ್ನಿಂದಲೇ ನಿನಗಾಗಿಯೇ
ನೀನು ಅಲ್ಲಿ ಶ್ರೀಮಂತನು
ಇಲ್ಲಿ ನಮಗಿಂತಲೂ ಕಡು ಬಡವನು
ನಿನಗಾಗಿ ಕೊಡದಿರುವುದು ಏನದೆ
ನಗುತ್ತ ಕುಳಿತಿರುವೆ
ನಾಲ್ಕು ಗೋಡೆಗಳ ನಡುವೆ
ದೇವರೇ, ನೀನೆಷ್ಟು ಒಳ್ಳೆಯವನು..!!
ನಿನ್ನ ಕರುಣೆಗಾಗಿ
ಅದೆಷ್ಟು ಪ್ರಾರ್ಥನೆಗಳು ಪೂಜೆಗಳು
ಬಡವರು ಬಡವರಾಗಿ
ಶ್ರೀಮಂತರು ಶ್ರೀಮಂತರಾಗಿ
ಮೂಕಜೀವಿಗಳು ಮೂಕವಾಗಿ
ಸತ್ಯಗಳು ಅಸತ್ಯಗಳಾಗಿ
ಎಲ್ಲವನ್ನೂ ನೋಡುತ್ತಿರುವೆ
ನಿನಗಿರುವ ಸಹನೆ ಯಾರಿಗೂ ಇಲ್ಲ
ತೆಗಳಿದರೂ ಹೊಗಳಿದರೂ
ಆರಾಧಿಸಿದರೂ ಕಡೆಗಣಿಸಿದರೂ
ಕೊಟ್ಟರೂ ಕೊಡದಿದ್ದರೂ
ನಿನ್ನ ಪ್ರತಿಕ್ರಿಯೆ ಏನೂ ಇಲ್ಲ
ದೇವರೇ, ನೀನೆಷ್ಟು ಒಳ್ಳೆಯವನು..!!