**ಬಣ್ಣದ ದೋಣಿ**
ಮಳೆಗಾಲ ಪ್ರಾರಂಭವಾಯಿತು. ಮಳೆಯಾಗದೇ ತುಂಬಾ ದಿನಗಳಾಗಿದ್ದವು. ಬಿಸಿಲಿನ ಬೇಗೆಗೆ ರಾಮಾಪುರದ ಮಕ್ಕಳೆಲ್ಲಾ ಬೇಸತ್ತು ಹೋಗಿದ್ದರು. ಯಾವಾಗ ಮಳೆಯಾಗುವುದೋ , ಮಳೆಯಲ್ಲಿ ಯಾವಾಗ ಆಟವಾಡುವೆವೋ ಎಂದು ಮಕ್ಕಳೆಲ್ಲಾ ತುಂಬಾ ನಿರೀಕ್ಷೆ ಹೊಂದಿದ್ದದ್ದರು. ಈಗ ಮಳೆಗಾಲ ಪ್ರಾರಂಭವಾಗಿದೆ. ಈ ಮಳೆಗಾಲದಲ್ಲಿ ಮಳೆ ಧೋ ಧೋ ಎಂದು ಸುರಿಯುತ್ತಿದೆ . ರಾಮಪುರದ ಮಕ್ಕಳಿಗೆ ಮಳೆಗಾಲದಲ್ಲಿ ಆಟವಾಡುವುದು, ಮಳೆಯಲ್ಲಿ ನೆನೆಯುವುದು ತುಂಬಾನೇ ಇಷ್ಟ . ಆದರೆ ಮನೆಯ ಹೊರಗಡೆ ತುಂಬಾ ಮಳೆ. ಮನೆಯಲ್ಲಿ ಆಟ ಆಡೋಣವೆಂದರೆ ಅಪ್ಪ-ಅಮ್ಮ ಬಯ್ಯುತ್ತಾರೆ. ಗಲಾಟೆ ಮಾಡಬಾರದು ಎಂದು ಸಿಡುಕುತ್ತಾರೆ. ಅಕ್ಕ ಅಣ್ಣ ಓದುತ್ತಿರುತ್ತಾರೆ. ಮನೆಯಲ್ಲಂತೂ ಆಟವಾಡುವುದಕ್ಕೆ ಆಗೋದೇ ಇಲ್ಲ . ಮನೆಯ ಹೊರಗಡೆ ಹೋಗಿ ಅಂಗಳದಲ್ಲಿ ಆಡೋಣವೆಂದರೆ ಮಳೆಯ ಕಾಟ. ಸ್ವಲ್ಪ ತಲೆ ತೊಳೆದರೆ ಸಾಕು ಅಮ್ಮ ಬೈಯೊದಕ್ಕೆ ಶುರು ಮಾಡುತ್ತಾರೆ. "ಮಳೆಯಲ್ಲಿ ಆಟವಾಡಿದಾಗ ನೆಗಡಿ ಕೆಮ್ಮು ಬಂದರೆ ಏನು ಗತಿ? ತೆಪ್ಪಗೆ ಮನೆಯಲ್ಲಿ ಇರಬಾರದೇ?" ಅನ್ನುತ್ತಾರೆ. ಮನೆಯಿಂದ ಹೊರಗೆ ಹೋಗುವುದೇ ಅಪರೂಪ . ಇದು ಪುಟ್ಟನ ಪರಿಸ್ಥಿತಿ ಅಷ್ಟೇ ಅಲ್ಲ ಊರಿನ ಎಲ್ಲ ಮಕ್ಕಳ ಪರಿಸ್ಥಿತಿಯು ಆಗಿತ್ತು.
ಆ ದಿನ ಮಳೆ ತುಂಬಾ ಜೋರಾಗಿ ಸುರಿಯುತ್ತಿತ್ತು . ಮಳೆಗೆ ತುಂಬಾ ಕೋಪ ಬಂದಿತ್ತು ಅಂತ ಕಾಣಿಸುತ್ತದೆ. ಬಿಟ್ಟು ಬಿಡದೆ ಮಳೆ ಸುರಿಯುತ್ತಲೇ ಇತ್ತು. ಮಧ್ಯಾಹ್ನದ ನಂತರ ಸಂಜೆ ಬರುವುದರೊಳಗೆ ಮಳೆರಾಯನಿಗೂ ಸೂರ್ಯನಿಗೂ ಅದಕ್ಕೇನೋ ಒಪ್ಪಂದವಾದಂತೆ ಕಾಣಿಸುತ್ತದೆ. ಮಳೆರಾಯ ಹೋಗಿಬಿಟ್ಟ . ರವಿಮಾಮ ಬಂದುಬಿಟ್ಟ . ತಿಳಿಬಿಸಿಲು ಎಲ್ಲೆಡೆ ಹರಡಿ ಬಿಡ್ತು . ಪುಟ್ಟನ ಮನೆಯ ಮುಂದೆ ನೀರು ಸಣ್ಣ ಹಳ್ಳದಂತೆ ಹರಿಯುತ್ತಲೇ ಇತ್ತು . ಸ್ವಲ್ಪ ಆಚೀಚೆ ನೋಡಿ ಅಪ್ಪ ಇಲ್ಲದ್ದನ್ನು ಕಂಡು ಮನೆಯಿಂದ ಹೊರಗಡೆ ಬಂದು ನೀರಿನ ಝರಿಯಲ್ಲಿ ನಿಂತು ಟಪ್ ಟಪ್ ಎಂದು ಪುಟ್ಟ ಜಿಗಿಯ ತೊಡಗಿದ. ಸ್ವಚ್ಛವಾದ ಮಳೆ ನೀರು . ಪುಟ್ಟನ ಕಾಲುಗಳು ಸ್ವಚ್ಛವಾಗಿ ಹೊಳೆಯುತ್ತಿದ್ದವು. ಪುಟ್ಟನಿಗೆ ಅದೇನು ಖುಷಿಯೋ ಖುಷಿ.
ಪುಟ್ಟ ಆಡೋದನ್ನು ಇತರೆ ಹುಡುಗರು ನೋಡಿ ಸುಮ್ಮನಿರಲಿಲ್ಲ. ಓಣಿಯ ಬಸವ , ಸೋಮ , ಕಿರಣ ಜಾನಿ , ಕಮಲ , ನೇತ್ರ ಹೀಗೆ ಎಲ್ಲಾ ಮಕ್ಕಳು ಒಂದು ಝರಿಯಲ್ಲಿ ನಿಂತು ನೀರಿನಲ್ಲಿ ಆಟವಾಡತೊಡಗಿದರು. ಪುಟ್ಟನಿಗೆ ಗೆಳೆಯನೊಬ್ಬನಿದ್ದ . ಅವನ ಹೆಸರು ಕಿರಣ ಎಲ್ಲರೂ ಅವನನ್ನು ಕಿಣ್ಯ ಎಂದು ಕರೆಯುತ್ತಿದ್ದರು. ಸ್ವಲ್ಪ ಬುದ್ಧಿವಂತ . ನೀರು ಹರಿಯುವುದನ್ನು ನೋಡಿ ಥಟ್ಟಂತ ಅವನಿಗೆ ಏನೋ ಹೊಳೆದಂತೆ ಆಯಿತು. ಎಲ್ಲರನ್ನೂ ಕುರಿತು "ನಾನು ನಿಮಗೆಲ್ಲಾ ಒಂದು ಮಜಾ ತೋರಿಸ್ತೀನಿ. ನೋಡುವಿರಂತೆ ಇರಿ" ಅಂತ ಮನೆಕಡೆ ಓಡಿ ಹೋಗಿಬಿಟ್ಟ. ಇವನಿಗೆ ಎಲ್ಲೋ ತಲೆಕೆಟ್ಟಿರಬೇಕು ಎಂದು ಎಲ್ಲರೂ ನೀರಲ್ಲಿ ಆಡತ್ತಿದ್ದರು.
ಕಿರಣ ಮನೆಯಿಂದ ಬಂದವನೇ ಕೈಯಲ್ಲಿ ಒಂದೆರಡು ದೋಣಿಗಳನ್ನು ಹಿಡಿದುಕೊಂಡು "ನೋಡಿ ಇಲ್ಲಿ , ನಾನು ದೋಣಿ ಓಡಿಸ್ತೀನಿ" ಅಂತ ಹೇಳಿ ನೀರಿನಲ್ಲಿ ದೋಣಿ ಬೆಟ್ಟ. ಹರಿಯುವ ನೀರಲ್ಲಿ ದೋಣಿ ಬಿಟ್ಟಾಗ ಕೇಳಬೇಕೆ ದೋಣಿಗಳು ನಾಮುಂದು ತಾಮುಂದು ಎನ್ನುತ್ತಾ ಮುಂದೆ ಮುಂದೆ ಹೋಗಿಬಿಟ್ಟವು. ಎಲ್ಲರಿಗೂ ಮಜಾ ಅನಿಸಿತು . ಕಿರಣನಿಗೆ ಬಲು ಡಿಮ್ಯಾಂಡ್ ಬಂತು. ಎಲ್ಲರೂ ಕಿರಣೆನಿಗೆ "ಲೋ ಕಿಣ್ಯ ನಮಗೂ ದೋಣಿ ಮಾಡೋದು ಹೇಳಿ ಕೊಡೋ" ಅಂದರು. ಕಿರಣ ಗತ್ತಿನಿಂದ "ದೋಣಿ ಮಾಡೋದಕ್ಕೆ ಕಾಗದ ಬೇಕು. ಕಾಗದ ತಂದರೆ ಮಾಡಿಕೊಡುತ್ತೇನೆ " ಎಂದು ಹೇಳಿದ . ಎಲ್ಲರೂ ತಮ್ಮ ತಮ್ಮ ಮನೆಗೆ ಹೋಗಿ ತಮ್ಮ ನೋಟು ಪುಸ್ತಕದ ಹಾಳೆಯನ್ನು ಹರಿದು ತಂದು ಕಿರಣನಿಗೆ ಕೊಟ್ಟರು. ಕಿರಣ ಪಾಳೆಯ ಪ್ರಕಾರವಾಗಿ ಎಲ್ಲರಿಗೂ ದೋಣಿ ಮಾಡಿಕೊಟ್ಟ .
ಪುಟ್ಟನಿಗೆ ದೋಣಿ ಬೇಕು ಅಂತ ಆಸೆ ಆಯಿತು. ಮನೆಗೆ ಬಂದು ಒಂದು ಸಣ್ಣ ಕಾಗದ ತಂದು ಕಿರಣ ನಿಂದ ದೋಣಿ ಮಾಡಿಸಿಕೊಂಡು ತಾನು ನೀರಿನಲ್ಲಿ ಬಿಟ್ಟ . ಎಲ್ಲಾ ಮಕ್ಕಳ ದೋಣಿಗಳು ಒಂದಕ್ಕೊಂದು ಡಿಕ್ಕಿ ಹೊಡೆಯುತ್ತಲೇ ಮುಂದಕ್ಕೆ ಹೊರಟವು. ಪುಟ್ಟನ ದೋಣಿಯ ಮೇಲೆ ಬಸವ ಆಯತಪ್ಪಿ ಕಾಲಿಟ್ಟ. ಪುಟ್ಟನ ದೊಇಣಿ ಅಪ್ಪಚ್ಚಿ ಆಯ್ತು. ಪುಟ್ಟನಿಗೆ ತುಂಬಾ ದುಃಖ ಉಕ್ಕಿ ಬಂದಿತು ತನ್ನ ದೋಣಿ ಹಾಳು ಆಯ್ತಲ್ಲ ಅಂತ ಜೋರಾಗಿ ಅಳತೊಡಗಿದ. ಪುಟ್ಟ ಅಳುವುದನ್ನು ಕಂಡು ಎಲ್ಲ ಹುಡುಗರು ಓಡಿಹೋಗಿಬಿಟ್ಟರು. ಪುಟ್ಟನ ಅಮ್ಮ ಬಂದು ಕಾರಣ ತಿಳಿದುಕೊಂಡರು. ಪುಟ್ಟನಿಗೆ ಸಮಾಧಾನ ಮಾಡಿ , "ನಿನಗೆ ವಿಶೇಷವಾದ ಬಣ್ಣದ ದೋಣಿ ಮಾಡಿಕೊಡುತ್ತೇನೆ ಅಳಬೇಡ' ಎಂದರು. ಅಮ್ಮ ಒಂದು ಬಣ್ಣದ ಕಾಗದದಿಂದ ದೊಡ್ಡ ದೋಣಿಯನ್ನು ಮಾಡಿಕೊಟ್ಟರು.
ಈಗ ಪುಟ್ಟನ ದೋಣಿ ಎಲ್ಲರಿಗಿಂತ ದೊಡ್ಡದು ಹಾಗೂ ಸುಂದರವಾದ ಬಣ್ಣದ ದೋಣಿ. ಪುಟ್ಟ ನೀರಿನಲ್ಲಿ ಬಣ್ಣದ ದೋಣಿಯನ್ನು ಬಿಟ್ಟಾಗ ಬಹಳ ಸುಂದರವಾಗಿ ಕಾಣತೊಡಗಿತು. ಪುಟ್ಟನಿಗೆ ತುಂಬಾ ತುಂಬಾನೆ ಖುಷಿಯಾಗಿ ಕುಣಿಯತೊಡಗಿದ. ಏನಾಯಿತು ಎಂದು ಎಲ್ಲ ಮಕ್ಕಳು ಮೆಲ್ಲನೆ ಬಂದು ಬಣ್ಣದ ದೋಣಿಯನ್ನು ನೋಡಿದರು . ಮಕ್ಕಳೆಲ್ಲ ಪುಟ್ಟನ ದೋಣಿಯನ್ನು ನೋಡಿ ಪುಟ್ಟನ ದೋಣಿ ಬಣ್ಣದ ದೋಣಿ" ಎಂದು ಕುಣಿದಾಡಿದರು.
=> ವೆಂಕಟೇಶ ಚಾಗಿ
No comments:
Post a Comment