Wednesday, 15 September 2021

Sahitya / kavana / kavite / ಕವಿತೆ / ಬಾಡಿಗೆ ಮನೆ - ವೆಂಕಟೇಶ ಚಾಗಿ / venkatesh chagi / #vktworld #shaale #ಶಾಲೆ


 


**ಬಾಡಿಗೆ ಮನೆ**



ದೇವರಿಗೊಂದು ಮನೆ ಕಟ್ಟಲಾಗಿದೆ
ಅದು ಬಾಡಿಗೆ ಮನೆ
ಮನೆಯೊಳಗೋ ಮೌನ ಬರಿಮೌನ
ದೇವರು ಮಾತ್ರ ಪ್ರಸನ್ನ
ಬೆಳಕಿನಲ್ಲಿ ಬೆಳಕು ಮೂಡಿಸಿ
ದೇವರು ನಗುತ್ತಿದ್ದಾನೆ..

ಕೆಲವು ಕಣ್ಣುಗಳು ದೇವರನ್ನು ಕಂಡು
ಕಣ್ಣೀರು ಸುರಿಸುತ್ತಿವೆ
ಮತ್ತೆ ಕೆಲವು ಕಣ್ಣುಗಳು
ದೇವರ ಸೌಂದರ್ಯವನು 
ಕಣ್ಣತುಂಬ ತುಂಬಿಕೊಳ್ಳುತ್ತಿವೆ

ಬಾಡಿಗೆ ಮನೆಯ ತುಂಬಾ
ಆಸೆ ಆಮೀಷಗಳು ತುಂಬಿ ತುಳುಕುತಿವೆ
ದೇವರಿಗಷ್ಟೇ ಅಲ್ಲ
ಉಸಿರಾಡುವ ಕಲ್ಲುಗಳಲ್ಲೂ ಸಹ
ಗೋಡೆಯ ಮೇಲಿನ ಬಡವರು
ನಗುತ್ತಾ ನಗುತ್ತಾ ಅಳುತ್ತಿದ್ದಾರೆ

ಗ್ರಹಣ ಗ್ರಹಗತಿಗಳು
ಕಳ್ಳಕಾಕರೆಂದರೆ ದೇವರಿಗೂ ಭಯ
ನಗ ನಾಣ್ಯಗಳ ವ್ಯಾಮೋಹ
ಮುನಿಸು ಸಂತೃಪ್ತಿಗಳು ಮತ್ತಷ್ಟು
ಬಾಡಿಗೆ ಮನೆಗೊಮದು ದೊಡ್ಡಬೀಗ
ಆದರೂ ದೇವರಿಗೆ ಸಾಂತ್ವಾನ 
ದೇವರು ಎಲ್ಲೆಡೆಯೂ ಇದ್ದಾನೆ

ರೋಗ ರುಜಿನಗಳು
ದೇವರಿಗೂ ಬರಬಹುದು
ದೇವರಿಗೆ ಮಾತ್ರ ಪರಿಶುದ್ಧತೆಯ ಕಾಳಜಿ
ಮೊರೆಯಿಡುವ ಖಾಲಿಕೈಗಳು
ನೂರಾರು ಸಾವಿರಾರು
ದೇವರು ಮಾತ್ರ ಸದಾ ಹಸನ್ಮುಖಿ
ತನ್ನ ಮನೆಗೆ ತಾನೇ ಬಾಡಿಗೆ ಕಟ್ಟುತ..

ದೇವರಿಗೂ ನಿಯಮಗಳ ಬಂಧನ
ಸಂಸಾರದ ತಾಪತ್ರಯಗಳಿಗಿಂತಲೂ
ಬಾಡಿಗೆ ಮನೆಯೊಳಗೆ ಅಧಿಕ
ದೇವರು ಎಲ್ಲವನೂ ಮರೆತಂತಿದೆ
ಇತಿಹಾಸದ ಪುಟಗಳಲ್ಲಿ ಅಮರ
ಮತ್ತೆ ಹೊಸ ಹುಟ್ಟು ಹೊಸ ಹೆಸರು
ಅದೇ ಬಾಡಿಗೆ ಮನೆಯಲ್ಲಿ..



ವೆಂಕಟೇಶ ಚಾಗಿ

Thursday, 9 September 2021

Sahitya / kavana / kavite / ಕವಿತೆ / ಧರೆಯ ನಕ್ಷತ್ರಗಳು - ವೆಂಕಟೇಶ ಚಾಗಿ / venkatesh chagi / #vktworld #shaale #ಶಾಲೆ

 


**ಧರೆಯ ಮೇಲಿನ ಆಕಾಶಗಳು**

(ಕವಿತೆ)

ಆಕಾಶ ತಾನು ಸ್ವಚ್ಛವಾಗಬೇಕು
ಎಂದುಕೊಂಡಿತು
ಅದಕ್ಕಾಗಿ ತನ್ನ ನೋವುಗಳನ್ನೆಲ್ಲಾ ನೆನೆದು
ಗಳಗಳನೇ ಅತ್ತುಬಿಟ್ಟಿತು
ದುಃಖ ತುಂಬಿದ ಮೋಡಗಳೆಲ್ಲಾ
ಆಕಾಶದ ಉಸಿರನ್ನೆಲ್ಲಾ ತಂಪುಗೊಳಿಸಿ
ಒಂದನ್ನೊಂದು ಸೇರಿ 
ಬಿಗಿದಪ್ಪಿಕೊಂಡವು 
ಮತ್ತೆ ಅಗಲಲಾರದಂತೆ ಮತ್ತೆಂದು;

ಆಕಾಶ ಕೋಪದಿಂದ ಗುಡುಗಿ
ಮನದಲ್ಲಿದ್ದ ಬೆಂಕಿಯ ಸಿಡಿಲನ್ನು 
ಹೀರಿ ತೆಗೆದು ಹೊರಹಾಕಿತು
ಕಾರ್ಮೋಡಗಳೆಲ್ಲಾ ಕರಗಿದವು
ಎಲ್ಲವೂ ಶಾಂತ
ಆಕಾಶವೂ ಸಹ;

ಆಕಾಶದ ನೋವುಗಳೀಗ
ನೆಲದ ಮೇಲೆ ಎಲ್ಲೆಂದರಲ್ಲಿ ಬಿದ್ದಿವೆ
ಕೆಲವು ಮಾಳಿಗೆಯ ಮೇಲೆ
ಕೆಲವು ಕೆಲವರ ಮೇಲೆ
ಕೆಲವಂತೂ ಚರಂಡಿಯಲ್ಲಿ
ಇನ್ನೂ ಕೆಲವನ್ನು ಕೆಲವರು 
ಗುಡ್ಡೆ ಹಾಕಿದ್ದಾರೆ ಆಣೆಕಟ್ಟುಗಳಲ್ಲಿ;

ನಾಕಂಡಂತೆ ಆಕಾಶದ ನೋವುಗಳನ್ನು
ಹೆಚ್ಚು ಬಾಚಿಕೊಂಡವಳೆಂದರೆ
ಅವ್ವ ಒಬ್ಬಳೇ;
ಹಾಗಾಗಿ ಅವಳ ಕಣ್ಣುಗಳೂ ಸಹ
ಆಕಾಶಗಳಾಗಿವೆ
ಎಲ್ಲವನು ಕಂಡು ಎಲ್ಲವನು ಉಂಡು;

ಈಗ ಯಾರು ಮಿಗಿಲು
ಈ ಇಬ್ಬರಲಿ ?
ಆಕಾಶವೋ ಅಥವಾ ಅವ್ವ ?
ಆಕಾಶ, ಎಲ್ಲವನೂ ಉಂಡು 
ಎಲ್ಲವನೂ ಮತ್ತೆ ಮರಳಿಸಿ 
ಸ್ವಚ್ಛವಾಗಿಬಿಡುತ್ತದೆ
ಆದರೆ ಧರೆಯ ಮೇಲಿನ ಆಕಾಶಗಳು
ಎಲ್ಲವನ್ನೂ ಉಂಡು ಉಂಡೂ
ತಾವು ಬೆಂಡಾಗುತ್ತವೆ ಮತ್ತಷ್ಟು ಬಾಗಿ;
ನೋವುಗಳು ಹೊರಬಂದದ್ದು
ಇನ್ನೊಂದು ನೋವನ್ನು ಕಂಡಾಗ ಮಾತ್ರ

ಆದರೂ ಅವುಗಳನ್ನು 
ಕಟ್ಟಿಹಾಕಲಾಗಿತ್ತು ಸೆರಗಿನಲ್ಲಿ
ಮತ್ತೆಲ್ಲೂ ಸೋರಿ ಹೋಗದಂತೆ..!!


=> ವೆಂಕಟೇಶ ಚಾಗಿ

MDM ONLINE ATTENDANCE step by step

  STEP 1 download below two apps 1) SATS MDM APP👇👇 https://play.google.com/store/apps/details?id=com.ictinfra.stsmdm 2) SATS KARNATAKA APP...