Friday, 6 September 2024
ಕವನ | ನಗುವಂತಾಗಿದೆ | ವೆಂಕಟೇಶ ಚಾಗಿ | naguvantagide | venkatesh chagi
**ನಗುವಂತಾಗಿದೆ**
ಬದುಕನ್ನೇ ತಮ್ಮೆಡೆಗೆ ತಿರುಗಿಸಿ
ತಮ್ಮ ಪರಾಕ್ರಮದ ಶೌರ್ಯ ಸಾಹಸದ
ಇತಿಹಾಸದ ಜಯವಿಜಯಗಳ ಬಗ್ಗೆ
ಪಂಖಾನುಪುಂಖವಾಗಿ
ಕೂಗುವ ಜನರ ಕಂಡು
ಇತ್ತೀಚೆಗೆ ಏಕೋ ನಗುವಂತಾಗಿದೆ ||
ಶಾಂತಿಯ ಸಾಗರಕೆ ತೂತುಕೊರೆದು
ಕ್ರಾಂತಿ ಎಂಬ ಹುಚ್ಚು ಬೀಜಬಿತ್ತಿ
ಶಾಂತಿಗಾಗಿ ಪರಿತಪಿಸುತಲಿ
ಶಾಂತ ಮನಸ್ಸುಗಳ ನಡುವೆ
ಅಶಾಂತಿಯ ಹರಡುವ ಜನರ ಕಂಡು
ಇತ್ತೀಚೆಗೆ ಏಕೋ ನಗುವಂತಾಗಿದೆ ||
ಸತ್ತ ಜೀವಗಳ ತಪ್ಪು ಹುಡುಕುತ
ಸುತ್ತಲೂ ಕತ್ತಲೆ ಎಂದು ವಾದಿಸುತ
ಬೆಳಕಿನ ಮನೆಯಲ್ಲಿ ಬೆಳಕನ್ನು ಹುಡುಕುತ್ತಾ
ಬೆಳಕಿನ ಬಣ್ಣಗಳಿಗೊಂದು ಧರ್ಮ ಕರ್ಮ
ಹುಟ್ಟು ಕುರುಡರಂತಿರುವ ಜನರ ಕಂಡು
ಇತ್ತೀಚೆಗೆ ಏಕೋ ನಗುವಂತಾಗಿದೆ ||
ಮನೆಯೊಳಗೊಂದು ಮರವನು ತಂದು
ಮರಕ್ಕೊಂದಿಷ್ಟು ಎಲೆಗಳಂಟಿಸಿ
ಕೃತಕವಾಗಿ ಗಾಳಿ ಬೀಸುತಲಿ
ನೆರಳಿನಲಿ ನೆರಳ ಹರಡಿಸಿ
ಹಸಿರೆಂದು ಉಸಿರಾಡುವ ಜ್ಞಾನಿಗಳ ಕಂಡು
ಇತ್ತೀಚಿಗೆ ಏಕೋ ನಗುವಂತಾಗಿದೆ ||
ಹುಟ್ಟುತಲಿ ಅಕ್ಷರಗಳನುಂಡು
ಹಗಲು ಇರುಳು ಪಠಣ ಮಾಡಿ
ಮನೆ ಮಠಗಳ ಅಡವಿಟ್ಟು
ಹೊಟ್ಟೆ ಕಟ್ಟಿ ಸುಟ್ಟು ಬೆಳೆದರೂ
ಸುಖ ಕಾಣದ ಮನಸ್ಸುಗಳ ಕಂಡು
ಇತ್ತೀಚಿಗೆ ಏಕೋ ನಗುವಂತಾಗಿದೆ ||
=> ವೆಂಕಟೇಶ ಚಾಗಿ
No comments:
Post a Comment
Newer Post
Older Post
Home
View mobile version
Subscribe to:
Post Comments (Atom)
No comments:
Post a Comment